ಛತ್ತರ್‌ಪುರ (ಮಧ್ಯಪ್ರದೇಶ): ಸ್ವಯಂಘೋಷಿತ ದೇವ ಮಾನವ, ಮಧ್ಯಪ್ರದೇಶದ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಶಾಸ್ತ್ರಿ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದೀಗ ಧೀರೇಂದ್ರ ಶಾಸ್ತ್ರಿ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ನಾನು ಸಂತನಲ್ಲ, ನಾನು ಸರಳ ವ್ಯಕ್ತಿ ಎಂದಿರುವ 26 ವರ್ಷದ ಹರೆಯದ ಶಾಸ್ತ್ರಿ ತಾವು ಶೀಘ್ರದಲ್ಲೇ ಮದುವೆಯಾಗುವ ಬಗ್ಗೆ ಖಚಿತ ಪಡಿಸಿದ್ದಾರೆ.
ಸೋಮವಾರ ಮತ್ತು ಮಂಗಳವಾರ ತಡರಾತ್ರಿ ಛತ್ತರ್‌ಪುರದ ಬಾಗೇಶ್ವರ ಧಾಮದಲ್ಲಿ ನಡೆದ ಧಾರ್ಮಿಕ ಪ್ರವಚನದಲ್ಲಿ ಮಾತನಾಡುತ್ತ, ಸ್ವಯಂಘೋಷಿತ ದೇವ ಮಾನವ ಧೀರೇಂದ್ರ ಶಾಸ್ತ್ರಿ ತಮ್ಮ ಮದುವೆ ಬಗ್ಗೆ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಪ್ರವಚನವನ್ನು ಕೇಳಲು ನೆರೆದಿದ್ದ ಶಿಷ್ಯ ವೃಂದ ಮತ್ತು ಹಲವಾರು ಭಕ್ತರ ಸಮ್ಮುಖದಲ್ಲೇ ತಾವು ಇಷ್ಟು ದಿನ ಕಾಪಾಡಿಕೊಂಡು ಬಂದಿದ್ದ ವಿವಾಹ ರಹಸ್ಯದ ಕುರಿತ ಮುಕ್ತವಾಗಿ ಮಾತನಾಡಿದ್ದಾರೆ. ಈ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮದುವೆ ಬಗ್ಗೆ ಧೀರೇಂದ್ರ ಶಾಸ್ತ್ರಿ ಹೇಳಿದ್ದೇನು?: ಪ್ರವಚನ ನೀಡುತ್ತಾ ಬಾಗೇಶ್ವರ ಧಾಮದ ಪೀಠಾಧೀಶ್ವರ ಧೀರೇಂದ್ರ ಶಾಸ್ತ್ರಿ, ಆಗಾಗ್ಗೆ ಜನರು ನನ್ನ ಮದುವೆಯ ಬಗ್ಗೆ ಮಾತನಾಡುತ್ತಿರುತ್ತಾರೆ. ನಾನು ಸಂತನಲ್ಲ, ನಾನು ಸರಳ ವ್ಯಕ್ತಿ. ನಾನು ನನ್ನಿಂದಾದ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ನಮ್ಮ ಪ್ರಭುವಾದ ಬಾಲಾಜಿಯ ಪಾದದಡಿ ನಾನು ವಾಸಿಸುತ್ತಿದ್ದೇನೆ. ನಮ್ಮ ಋಷಿಗಳ ಪರಂಪರೆಯಲ್ಲಿ ಹಲವಾರು ಮಹಾಪುರುಷರು ತಮ್ಮ ಜೀವನವನ್ನು ಗೃಹಸ್ಥರಾಗಿ ಕಳೆದಿದ್ದಾರೆ. ನಂತರ ಗೃಹಸ್ಥ ಜೀವನದಲ್ಲಿ ದೇವರು ಕಾಣಿಸಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಹಲವಾರು ಸಂತರು ಮತ್ತು ದಾರ್ಶನಿಕರು ತಮ್ಮ ಜೀವನದ ನಾಲ್ಕು ಹಂತಗಳನ್ನು ದಾಟಿದ್ದಾರೆ. ಬ್ರಹ್ಮಾಚಾರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸವನ್ನು ಸಂತರು ಕಾಣುತ್ತಾರೆ. ಹಾಗಾಗಿ, ನಾನು ಶೀಘ್ರದಲ್ಲೇ ಮದುವೆಯಾಗಲಿದ್ದೇನೆ. ಆದರೆ, ಮದುವೆ ಸಮಾರಂಭಕ್ಕೆ ನಾನು ಎಲ್ಲರಿಗೂ ಆಹ್ವಾನವನ್ನು ನೀಡುವುದಿಲ್ಲ. ಜನರು ನನ್ನ ಮದುವೆ ಸಮಾರಂಭವನ್ನು ತಮ್ಮ ಮನೆಯಲ್ಲೇ ಕುಳಿತು ವೀಕ್ಷಿಸಬಹುದು. ನನ್ನ ಮದುವೆಯ ನೇರ ಪ್ರಸಾರವಾಗಲಿದೆ. ಜನರು ತಮ್ಮ ಟಿವಿ ಸೆಟ್‌ಗಳಲ್ಲಿ ನನ್ನ ಮದುವೆ ಸಮಾರಂಭವನ್ನು ನೋಡಬಹುದು ಎಂದೂ ಬಾಗೇಶ್ವರ ಧಾಮ ಸರ್ಕಾರ್ ಎಂದೇ ಖ್ಯಾತರಾದ ಧೀರೇಂದ್ರ ಶಾಸ್ತ್ರಿ ತಿಳಿಸಿದ್ದಾರೆ.
ಜಯಾ ಕಿಶೋರಿ ಹೆಸರು ತಳುಕು: ಹಲವು ದಿನಗಳಿಂದ ಬಾಗೇಶ್ವರ್ ಧಾಮ ಸರ್ಕಾರ್ ಮದುವೆ ಬಗ್ಗೆ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ಪ್ರೇರಕ ವಾಗ್ಮಿ ಜಯಾ ಕಿಶೋರಿ ಅವರೊಂದಿಗೂ ಧೀರೇಂದ್ರ ಶಾಸ್ತ್ರಿ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಮದುವೆಯಾಗುತ್ತಾರೆ ಎಂಬ ಚರ್ಚೆ ಸಹ ಜೋರಾಗಿ ಕೇಳಿ ಬಂದಿತ್ತು. ಆದರೆ, ಇದನ್ನು ಸ್ವತಃ ಧೀರೇಂದ್ರ ಅವರೇ ಅಲ್ಲಗಳೆದಿದ್ದು, ಜಯಾ ಕಿಶೋರಿ ನನ್ನ ಸಹೋದರಿಯಂತೆ ಎಂದು ಹೇಳಿದ್ದರು. ಮತ್ತೊಂದೆಡೆ, ಧೀರೇಂದ್ರ ಶಾಸ್ತ್ರಿ ಈ ಹೇಳಿಕೆಗೆ ಜಯಾ ಕಿಶೋರಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು, ಪೌರಾಣಿಕ ಕಥೆಗಾರರೂ ಆಗಿರುವ ಧೀರೇಂದ್ರ ಶಾಸ್ತ್ರಿ ಇತ್ತೀಚೆಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದಾಗಿ ಹೇಳಿದ್ದರು. ಅಲ್ಲದೇ, ಎಲ್ಲರೂ ಸನಾತನ ಧರ್ಮವನ್ನು ಅನುಸರಿಸುವಂತೆಯೂ ಅವರು ಕರೆ ನೀಡಿದ್ದರು. ಧೀರೇಂದ್ರ ಶಾಸ್ತ್ರಿಗಳ ಈ ಹೇಳಿಕೆಯು ಸಾಕಷ್ಟು ಪರ ಮತ್ತು ವಿರೋಧ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಹೇಳಿಕೆ ನಂತರ ಬಾಗೇಶ್ವರ ಧಾಮ ಸರ್ಕಾರ್ ಮಾಧ್ಯಮಗಳ ಗಮನವನ್ನೂ ಸೆಳೆದಿದ್ದರು.
ಇದನ್ನೂ ಓದಿ:ಅತ್ಯಾಚಾರ ಪ್ರಕರಣ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ