ಅಯೋಧ್ಯೆ(ಉತ್ತರ ಪ್ರದೇಶ):ಕೋಟ್ಯಂತರ ರಾಮ ಭಕ್ತರು ತುದಿಗಾಲಲ್ಲಿ ನಿಂತು ಕಾಯುತ್ತಿರುವ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಕಾರ್ಯಕ್ರಮಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಜನವರಿ 22ರಂದು ನಡೆಯುವ ಸಮಾರಂಭದಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದರ ಜೊತೆಗೆ ಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲು ಕೂಡಾ ಸಿದ್ಧವಾಗಿದೆ.
ದೇಶದ ಅತ್ಯಂತ ಹಳೆಯ, ಮರದ ಕೆಲಸದಲ್ಲಿ ವಿಶೇಷ ನೈಪುಣ್ಯತೆ ಹೊಂದಿರುವ ಹೈದರಾಬಾದ್ ಮೂಲದ ಅನುರಾಧ ಇಂಟರ್‌ನ್ಯಾಶನಲ್ ಟಿಂಬರ್ ಕಂಪನಿಯ ಕುಶಲಕರ್ಮಿಗಳು ಚಿನ್ನದ ಬಾಗಿಲಿನ ಕೆತ್ತನೆಯನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ತೇಗದಿಂದ ಬಾಗಿಲುಗಳನ್ನು ತಯಾರಿಸಲಾಗಿದೆ. ಈ ಬಾಗಿಲು ಅಂದಾಜು 12 ಅಡಿ ಎತ್ತರ ಮತ್ತು 8 ಅಡಿ ಅಗಲವಿದೆ. ಬಾಗಿಲಿನ ಬೌಕಟ್ಟಿನ ಮೇಲೆ ಮಲಗಿರುವ ಭಂಗಿಯಲ್ಲಿರುವ ವಿಷ್ಣುವಿನ ಚಿತ್ರವನ್ನು ಮತ್ತು ಬಾಗಿಲುಗಳ ಮೇಲೆ ಭವ್ಯತೆಯ ಸಂಕೇತವಾಗಿ ಗಜ ಹಾಗು ಸುಂದರವಾಗಿ ವಿಷ್ಣು ಕಮಲವನ್ನು ಕೆತ್ತಲಾಗಿದೆ.
"ನಾವು ಅಯೋಧ್ಯೆ ದೇವಾಲಯದೊಳಗಿನ ಮತ್ತು ಸುತ್ತಮುತ್ತಲಿನ ಎಲ್ಲಾ ಬಾಗಿಲುಗಳನ್ನು ಮಾಡುತ್ತಿದ್ದೇವೆ. ಈ ಬಾಗಿಲುಗಳು ಭಾರತೀಯ ಸಾಂಪ್ರದಾಯಿಕ ಕೆತ್ತನೆಗಳಿಂದ ಮಾಡಲ್ಪಟ್ಟಿವೆ. ತಮಿಳುನಾಡಿನ ವಿಶೇಷ ಕುಶಲಕರ್ಮಿಗಳು ಶ್ರಮವಹಿಸಿದ್ದಾರೆ. ಬಾಗಿಲುಗಳನ್ನು ನಮ್ಮ ದೇಶದ ತೇಗದ ಮರದಿಂದ ಮಾಡಿರುವುದರಿಂದ ಉತ್ತಮ ಗುಣಮಟ್ಟ ಹೊಂದಿದೆ. ಈಗಾಗಲೇ 18 ಬಾಗಿಲುಗಳನ್ನು ತಯಾರಿಸಿದ್ದೇವೆ. ಅವುಗಳಿಗೆ ಶುದ್ಧ ಚಿನ್ನದ ಲೇಪನ ಮಾಡಲಾಗುತ್ತಿದೆ. ಈಗ ಒಂದು ಬಾರಿ ಚಿನ್ನದ ಲೇಪನ ಕೆಲಸ ಮುಗಿದಿದೆ. ಅವುಗಳನ್ನು ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ" ಎಂದು ಅನುರಾಧ ಇಂಟರ್‌ನ್ಯಾಶನಲ್ ಟಿಂಬರ್ ಕಂಪನಿಯ ವ್ಯವಸ್ಥಾಪಕ ಶರತ್ ಬಾಬು ವಿವರಿಸಿದರು.