ಪ್ರಕಾಶಂ (ಆಂಧ್ರಪ್ರದೇಶ) :ಪ್ರೀತಿಯ ಹೆಸರಿನಲ್ಲಿ ತನ್ನ ಮಗಳನ್ನು ಯುವಕನೊಬ್ಬ ಕರೆದೊಯ್ದ ಎಂಬ ಕೋಪದಲ್ಲಿ ಕುಟುಂಬವೊಂದು ಆ ಯುವಕನ ಸಹೋದರಿಯನ್ನು ಹಗ್ಗದಿಂದ ಕಟ್ಟಿಹಾಕಿ ಮನಬಂದಂತೆ ಥಳಿಸಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಭೀಕರ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯನ್ನು ರಕ್ಷಿಸಿ, ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ವಿವರ:ವಿಧವೆಯಾಗಿದ್ದ ಮಗಳನ್ನು ಗ್ರಾಮದ ಯುವಕ ಪ್ರೀತಿಸುತ್ತಿದ್ದ. ಕೆಲ ದಿನಗಳ ಬಳಿಕ ಇಬ್ಬರೂ ಗೌಪ್ಯವಾಗಿ ವಿವಾಹವಾಗಿದ್ದರು. ಇದರಿಂದ ಯುವತಿಯ ಕುಟುಂಬಸ್ಥರು ಅವಮಾನಕ್ಕೀಡಾಗಿದ್ದರು. ಇದರಿಂದ ಕೋಪಗೊಂಡಿದ್ದ ಅವರು ಭಾನುವಾರ ರಾತ್ರಿ ಆ ಯುವಕನ ಅಕ್ಕನ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾರೆ. ರಾತ್ರಿ ವೇಳೆ ಹೊರಬಂದಿದ್ದಾಗ ಮಹಿಳೆಯನ್ನು ಬೀದಿಯಲ್ಲಿ ಎಳೆದಾಡಿ ಹಗ್ಗದಿಂದ ಕಟ್ಟಿ ಹಾಕಿ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.
ಬೆತ್ತಲುಗೊಳಿಸಿ ಪೆಟ್ರೋಲ್ ಸುರಿದರು:ಕಣ್ಣಿಗೆ ಮೆಣಸಿನಕಾಯಿ ಪುಡಿ ಎಸೆದು, ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಆಕೆಯನ್ನು ಬೀದಿಯಲ್ಲಿ ದರದರನೇ ಎಳೆದೊಯ್ಯಲಾಗಿದೆ. ಬಳಿಕ ಮನೆಯೊಂದರಲ್ಲಿ ಬೆತ್ತಲುಗೊಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಇದನ್ನು ಕಂಡ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಬಂದ ಆರಕ್ಷಕರು ಮನೆಯಲ್ಲಿ ಕೂಡಿಹಾಕಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.