ನವದೆಹಲಿ:ಅಕ್ಟೋಬರ್ 1 ರಿಂದ ಅಕ್ಟೋಬರ್ 31 ರವರೆಗೆ ಸ್ವಚ್ಛ ಭಾರತ ಅಭಿಯಾನ ಆರಂಭಿಸುವುದಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 75ನೇ ಸ್ವಾತಂತ್ರ್ಯದ ವರ್ಷವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಭಾರತವನ್ನು ಕಸಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.
ಗಾಂಧೀಜಿ ಅವರ ಕನಸಿನ ಭಾರತ ನಿರ್ಮಾಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಆದ್ಯತೆಯಾದ ಸ್ವಚ್ಛ ಭಾರತದ ದೃಷ್ಟಿಕೋನದ ಸಾಕಾರಕ್ಕಾಗಿ ನಮ್ಮ ಸಂಕಲ್ಪ ಎಂದು ಠಾಕೂರ್ ಹೇಳಿದ್ದಾರೆ.
ಇದು ವಿಶ್ವದ ಅತಿ ದೊಡ್ಡ ಸ್ವಚ್ಛತಾ ಅಭಿಯಾನವಾಗಿದೆ ಎಂದು ತಿಳಿಸಿರುವ ಅನುರಾಗ್ ಠಾಕೂರ್, ಇದರಲ್ಲಿ ದೇಶದ ವಿವಿಧ ಭಾಗಳಿಂದ 75 ಲಕ್ಷ ಟನ್ ತ್ಯಾಜ್ಯ, ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ, ವೇಸ್ಟ್ ಟು ವೆಲ್ತ್ ಮಾದರಿಯಲ್ಲಿ ಸಂಸ್ಕರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಅಭಿಯಾನವು “ಸ್ವಚ್ಛ ಭಾರತ, ಸುರಕ್ಷಿತ ಭಾರತ” ಮಂತ್ರವನ್ನು ಪ್ರಚಾರ ಮಾಡಲಿದೆ ಎಂದರು.
ಇದನ್ನೂ ಓದಿ: ಭಾರತೀಯ ಜನತಾ ಪಾರ್ಟಿ "ಜುಮ್ಲಾ ಪಕ್ಷ" : ಮಮತಾ ಬ್ಯಾನರ್ಜಿ ಆರೋಪ
ಇದೇ ವೇಳೆ, ಸಂಕಲ್ಪದಿಂದ ಸಿದ್ಧಿ ಗುರಿಯೊಂದಿಗೆ ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗುರಿಸಾಧಿಸಲು ನೆರವಾಗಬೇಕು ಎಂದು ಅನುರಾಗ್ ಠಾಕೂರ್ ಮನವಿ ಮಾಡಿದ್ದಾರೆ.