ಚಂಡೀಗಢ (ಪಂಜಾಬ್): ಖಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ, ವಾರಿಸ್ ಪಂಜಾಬ್ ಸಂಘಟನೆಯ ಮುಖ್ಯಸ್ಥ ಅಮೃತ್‌ಪಾಲ್ ಸಿಂಗ್ ಮಾರ್ಚ್ 18 ರಿಂದ ತಲೆಮರೆಸಿಕೊಂಡಿದ್ದಾರೆ. ಆದರೆ, ಇದೀಗ ತನ್ನ ಸಹಚರ ಪಾಪಲ್ಪ್ರೀತ್ ಸಿಂಗ್ ಬಂಧನದ ನಂತರ ಅಮೃತ್‌ಪಾಲ್ ಒತ್ತಡಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಮುಂದಿನ 48 ಗಂಟೆಗಳಲ್ಲಿ ಪ್ರತ್ಯೇಕತಾವಾದಿ ನಾಯಕ ಪೊಲೀಸರಿಗೆ ಶರಣಾಗಬಹುದು ಎಂಬ ಮಾಹಿತಿ ಹೊರ ಬಿದ್ದಿದೆ.
ಇದನ್ನೂ ಓದಿ:ಖಲಿಸ್ತಾನ್ ಪ್ರತ್ಯೇಕವಾದಿ ಅಮೃತ್‌ಪಾಲ್‌ಗಾಗಿ ಯುಪಿ-ನೇಪಾಳ ಗಡಿಯಲ್ಲಿ ತೀವ್ರ ಶೋಧ
ಖಲಿಸ್ತಾನ್ ಪರ ಒಲವು ಹೊಂದಿರುವ ಅಮೃತ್‌ಪಾಲ್ ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ಸವಾಲಾಗಿದ್ದಾನೆ. ಕಳೆದ ಫೆಬ್ರವರಿಯಲ್ಲಿ ಅಮೃತ್‌ಪಾಲ್ ಸಿಂಗ್ನ ಸಹಾಯಕ ಲವ್‌ಪ್ರೀತ್‌ನನ್ನು ಬಿಡುಗಡೆ ಮಾಡಿಸುವ ನಿಟ್ಟಿನಲ್ಲಿ ಅಜ್ನಾಲ್ ಪೊಲೀಸ್ ಠಾಣೆ ಮೇಲೆ ಬೆಂಬಲಿಗರು ದಾಳಿ ಮಾಡಿದ್ದರು. ಈ ಮೂಲಕ ಅಮೃತ್‌ಪಾಲ್ ತನ್ನ ಪುಂಡಾಟ ಆರಂಭಿಸಿದ್ದ. ಇದರ ಬೆನ್ನಲ್ಲೇ ಪೊಲೀಸರು ಈತನ ಬಂಧನಕ್ಕೆ ಮಾರ್ಚ್ 18ರಂದು ಬೃಹತ್ ಕಾರ್ಯಾಚರಣೆ ಶುರು ಮಾಡಿದ್ದರು. ಅಪಾರ ಸಂಖ್ಯೆಯ ಪೊಲೀಸರ ಕಾರ್ಯಾಚರಣೆ ನಡುವೆಯೂ ಅಮೃತ್‌ಪಾಲ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಅಂದಿನಿಂದಲೂ ಪೊಲೀಸರ ಕೈಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಾ, ಬೇರೆ - ಬೇರೆ ಸ್ಥಳಗಳಿಗೆ ತನ್ನ ಮೊಕ್ಕಾಂ ಬದಲಾಯಿಸುತ್ತಿದ್ದಾನೆ.
ಅಮೃತ್‌ಪಾಲ್ ಶರಣಾಗತಿ? ಮತ್ತೊಂದೆಡೆ, ಪಂಜಾಬ್ ಪೊಲೀಸರು ಅಮೃತ್‌ಪಾಲ್ ಪತ್ತೆಗೆ ನಿರಂತರವಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ಏಪ್ರಿಲ್ 10ರಂದು ದೆಹಲಿ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆಪ್ತ ಪಾಪಲ್ಪ್ರೀತ್ ಸಿಂಗ್ಗೆ ಬಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಅಮೃತ್‌ಪಾಲ್ ಮುಂದಿನ 48 ಗಂಟೆಗಳಲ್ಲಿ ಶರಣಾಗಬಹುದು ಎಂಬ ಮಾಹಿತಿ ಪೊಲೀಸರಿಗೆ ಬಂದಿದೆ. ಹರ್ಮಂದಿರ್ ಸಾಹಿಬ್, ದಮ್ದಾಮಾ ಸಾಹಿಬ್ ಅಥವಾ ಆನಂದಪುರ ಸಾಹಿಬ್‌ನಲ್ಲಿ ಅಮೃತ್‌ಪಾಲ್ ಶರಣಾಗತಿ ಆಗಲಿದ್ದಾನೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲ ಮೂರು ಕಡೆಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಎಲ್ಲೆಡೆ ಅಲರ್ಟ್ ಘೋಷಿಸಲಾಗಿದೆ.