ನವದೆಹಲಿ: ದೇಶದ ಹಲವು ರಾಜ್ಯಗಳ ಕಾಂಗ್ರೆಸ್ ಘಟಕಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಧಿಕಾರಕ್ಕಾಗಿ ಅಥವಾ ಮುಂದಿನ ಇತರ ವಿಚಾರಗಳಿಗಾಗಿ ಕಿತ್ತಾಟ ಆರಂಭವಾಗಿದೆ. ಕೆಲವು ತಿಂಗಳುಗಳ ಹಿಂದೆ ಛತ್ತೀಸ್ಗಢದಲ್ಲಿ ಆರಂಭವಾಗಿದ್ದ ಕಾಂಗ್ರೆಸ್ ಒಳಜಗಳ ದೆಹಲಿ ತಲುಪಿದೆ.
ಛತ್ತೀಸ್ಗಢದಲ್ಲಿ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಊಹಾಪೋಹಗಳ ಬೆನ್ನಲ್ಲೇ ಹಲವಾರು ಶಾಸಕರು ದೆಹಲಿಗೆ ಭೇಟಿಯಾಗುತ್ತಿದ್ದಾರೆ. ಸಿಎಂ ಭೂಪೇಶ್ ಬಘೇಲ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಅವರ ಬೆಂಬಲಿಗ ಶಾಸಕರು ದೆಹಲಿಗೆ ತೆರಳಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭೂಪೇಶ್ ಬಘೇಲ್ ಪರ ಶಾಸಕರು ಇಲ್ಲಿ ಬಲಪ್ರದರ್ಶನವೆಂಬುದು ಇಲ್ಲ. ಅವರು ತಮ್ಮ ತಮ್ಮ ಸ್ವಂತ ವಿಚಾರಗಳಿಗೆ ದೆಹಲಿಗೆ ತೆರಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಭೂಪೇಶ್ ಬಘೇಲ್ ದೆಹಲಿಗೆ ತೆರಳಿದ್ದು ಯಾಕೆ..?
ಭೂಪೇಶ್ ಬಘೇಲ್ ಸಿಎಂ ಆದಾಗಿನಿಂದಲೂ ಛತ್ತೀಸ್ಗಢ ಕಾಂಗ್ರೆಸ್ನಲ್ಲಿ ಆಗಾಗ ಸ್ವಲ್ಪ ಮಟ್ಟದ ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದವು. ಚುನಾವಣೆ ಪ್ರಣಾಳಿಕೆ ಸಮಿತಿಯ ಮುಖ್ಯಸ್ಥರಾಗಿದ್ದ, ಈಗ ಆರೋಗ್ಯ ಸಚಿವ ತ್ರಿಭುವನೇಶ್ವರ್ ಸರಣ್ ಸಿಂಗ್ ಡಿಯೋ ಅಥವಾ ಟಿ.ಎಸ್.ಡಿಯೋ ಅವರೇ ವಿಧಾನಸಭಾ ಚುನಾವಣೆ ಗೆಲುವಿಗೆ ಕಾರಣ ಎಂದು ಅವರ ಬೆಂಬಲಿಗರು ಹೇಳಿಕೊಂಡಿದ್ದರು.