ಆರೋಗ್ಯವೇ ಭಾಗ್ಯವೇ ಭಾಗ್ಯ. ಹಾಗಾಗಿಯೇ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲೂ ಖಾಸಗಿವಲಯಕ್ಕೆ ಭಾರಿ ಹೂಡಿಕೆಯ ಅವಕಾಶ ಇರುವುದರಿಂದ ಭಾರತ ಸಾಕಷ್ಟು ಪ್ರಗತಿ ಕಾಣಲಿದೆ ಎಂದು ನೀತಿ ಆಯೋಗ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ದೇಶ ಕೋವಿಡ್-19 ಸೇರಿ ವಿವಿಧ ಸಾಂಕ್ರಾಮಿಕ ರೋಗದಲ್ಲಿ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಮಧ್ಯೆ ಈ ವರದಿ ಅತ್ಯಂತ ಆಶಾದಾಯಕವಾಗಿದೆ. ಆಯೋಗದ ವರದಿಯಲ್ಲಿ ಹೇಳಲಾಗಿರುವಂತೆ ಆತಿಥ್ಯ ಉದ್ಯಮವು ದೇಶದ ಆರೋಗ್ಯ ವಲಯದ ಶೇ.80ರಷ್ಟನ್ನು ಒಳಗೊಂಡಿದೆ. ಇದರಿಂದ ಪ್ರತಿ ವರ್ಷ ಶೇ.16 ರಿಂದ ಶೇ.17ರಷ್ಟು ಪ್ರಗತಿಯನ್ನು ಇದು ದಾಖಲಿಸುತ್ತಿದೆ.
ಮುಂದಿನ ಎರಡು ವರ್ಷಗಳಲ್ಲಿ 13,200 ಕೋಟಿ ಡಾಲರ್‌ಗಳ ಮಟ್ಟಕ್ಕೆ ಈ ವಲಯ ತಲುಪಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಫಾರ್ಮಾ ಮತ್ತು ವೈದ್ಯಕೀಯ ಸಲಕರಣೆ ವಿಭಾಗದಲ್ಲಿ ಪ್ರಗತಿ ಪರಿಗಣಿಸಿದರೆ, ವೈದ್ಯಕೀಯ ಸೇವೆಗಳ ವಲಯವು ಮುಂದಿನ ವರ್ಷ 27 ಲಕ್ಷ ಕೋಟಿ ರೂ. ಮಟ್ಟಕ್ಕೆ ತಲುಪಲಿದೆ ಎಂದು ಆಯೋಗ ಹೇಳಿದೆ. ವರದಿಯಲ್ಲಿ ಭಾರೀ ವಿದೇಶಿ ಹೂಡಿಕೆಯನ್ನು ಈ ವಲಯ ಆಕರ್ಷಿಸಲಿದೆ ಎಂದು ನೀತಿ ಆಯೋಗ ಹೇಳಿದೆ.
ಆರೋಗ್ಯ ವಿಮೆ, ಆರೋಗ್ಯ ಪ್ರವಾಸೋದ್ಯಮ, ಟೆಲಿ ಮೆಡಿಸಿನ್, ತಂತ್ರಜ್ಞಾನ ಆಧಾರಿತ ವೈದ್ಯಕೀಯ ಸೇವೆಗಳು ಮತ್ತು ಇತರ ಸಂಬಂಧಿತ ವಲಯಗಳೂ ಕೂಡ 2017ರಿಂದ 2022ರ ವೇಳೆಗೆ 27 ಲಕ್ಷ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ಬೆಳೆಯಲಿವೆ. ದೇಶದ ಶೇ.65ರಷ್ಟು ಆಸ್ಪತ್ರೆಯ ಬೆಡ್‌ಗಳು ಕರ್ನಾಟಕ, ತಮಿಳುನಾಡು,ಕೇರಳ, ಉ.ಪ್ರ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿವೆ. ಉಳಿದ ರಾಜ್ಯಗಳಲ್ಲಿ ಹಾಸಿಗೆ ವ್ಯವಸ್ಥೆಯನ್ನು ಶೇ. 30ರಷ್ಟು ಹೆಚ್ಚಳ ಮಾಡುವ ಅವಕಾಶ ಇದೆ ಎಂದು ಆಯೋಗ ಭಾವಿಸಿದೆ.
ನಮ್ಮ ದೇಶದಲ್ಲಿ ವಾರ್ಷಿಕವಾಗಿ 6 ಕೋಟಿ ಜನ ಆಸ್ಪತ್ರೆ ಬಿಲ್‌ಗಳನ್ನು ಪಾವತಿ ಮಾಡಿ ಬಡತನಕ್ಕೆ ಜಾರುತ್ತಿದ್ದಾರೆ. ಶೇ.90ರಷ್ಟು ರೋಗಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುತಿಸಿ, ಗುಣಪಡಿಸಬಹುದು ಎಂಬ ವಿಶ್ವ ಬ್ಯಾಂಕ್‌ನ ಸಲಹೆಯನ್ನು ನಾವು ಇಲ್ಲಿ ಪುನಃ ನೆನಪಿಸಿಕೊಳ್ಳಬಹುದು. ಆದರೆ, ಈ ಸಲಹೆಯನ್ನು ಎಲ್ಲರೂ ನಿರ್ಲಕ್ಷಿಸಿದ್ದಾರೆ. ಇದರಿಂದಾಗಿ, ಆರೋಗ್ಯ ಸೇವೆಗಳು ಎಂಬ ವಿಷಯವೇ ಈಗ ಶ್ರೀಮಂತರಿಗೆ ಮೀಸಲಿಟ್ಟ ಸಂಗತಿ ಎಂಬಂತಾಗಿದೆ.
ಮಾರಕ ಕೋವಿಡ್‌ನಂತಹ ರೋಗಗಳು ವಿಪರೀತ ಪ್ರಮಾಣದಲ್ಲಿ ಹರಡುತ್ತಿರುವ ಈ ಸಮಯದಲ್ಲಿ ಜನಸಾಮಾನ್ಯರಿಗೆ ಸರ್ಕಾರವು ಆರೋಗ್ಯ ಭದ್ರತೆ ಒದಗಿಸಬೇಕಿದೆ. ಈ ವಿಪತ್ತಿನ ಸನ್ನಿವೇಶದಲ್ಲೂ ಸರ್ಕಾರಗಳ ಇಂತಹ ಮನಸ್ಥಿತಿಯಿಂದಾಗಿ ಅವರು ದೂರವೇ ಉಳಿಯುವಂತಾಗಿದೆ. ಯಾವುದೇ ದೇಶದ ಪ್ರಗತಿಗೆ ದಕ್ಷ ಮಾನವ ಸಂಪನ್ಮೂಲ ಅತ್ಯಂತ ಅಗತ್ಯದ್ದಾಗಿದೆ.