ನವದೆಹಲಿ: ದೇಶದಲ್ಲಿ ಶರವೇಗದಲ್ಲಿ ಹರಡುತ್ತಿರುವ ಕೋವಿಡ್, ಒಮಿಕ್ರಾನ್ ಸೋಂಕು ತಡೆಯಲು ಕೇಂದ್ರ ಸರ್ಕಾರ ಇಂದು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ವಿದೇಶಗಳಿಂದ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 7 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿದೆ.
2022ರ ಜವನರಿ 11 ರಿಂದ ಈ ನಿಯಮಗಳು ಅಂತಾರಾಷ್ಟ್ರೀಯ ಪ್ರಯಾಣಿಯಕರಿಗೆ ಅನ್ವಯವಾಗಲಿದೆ. ದೇಶಕ್ಕೆ ಆಗಮಿಸಿದ 8ನೇ ದಿನ ಆರ್‌ಟಿ-ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯ ಫಲಿತಾಂಶವನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದರೆ ಅದನ್ನು ಆಯಾ ರಾಜ್ಯ ಸರ್ಕಾರಗಳು ಮೇಲ್ವಿಚಾರಣೆ ಮಾಡುತ್ತವೆ.
ಕೋವಿಡ್ ಪರೀಕ್ಷೆಯ ಫಲಿತಾಂಶಗಳು ನೆಗೆಟಿವ್ ಬಂದರೆ ಮುಂದಿನ 7 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ-ಮೇಲ್ವಿಚಾರಣೆ ಮಾಡಲು ಪ್ರಯಾಣಿಕರಿಗೆ ಸೂಚಿಸಲಾಗಿದೆ. ಪಾಸಿಟಿವ್ ಬಂದರೆ ಅವರ ಮಾದರಿಗಳನ್ನು ಇಂಡಿಯನ್ ಸಾರ್ಸ್-ಕೋವಿ-2 ಜಿನೊಮಿಕ್ಸ್ ಕನ್ಸಾರಿಟಿಂ(INSACOG) ಪ್ರಯೋಗಾಲಯದ ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ನಂತರ ನಿಗದಿತ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.