ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಶುಕ್ರವಾರ ಕೊನೆಯಾಗಿದ್ದು, ದೇಶದ ಹಳೆ ಪಕ್ಷದ ಸಾರಥ್ಯವು 26 ವರ್ಷಗಳ ನಂತರ ದಕ್ಷಿಣ ಭಾರತಕ್ಕೆ ಸಿಗುವುದು ಖಚಿತವಾಗಿದೆ.
ಆಂಧ್ರ ಪ್ರದೇಶದ ಪಿವಿ ನರಸಿಂಹ ರಾವ್ ಅವರು 1992ರಿಂದ 1996ರವರೆಗೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರೇ ದಕ್ಷಿಣ ಭಾರತದಿಂದ ಈ ಹುದ್ದೆಯನ್ನು ಅಲಂಕರಿಸಿದ ಕೊನೆಯ ವ್ಯಕ್ತಿಯು ಹೌದು. ಇದೀಗ ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳದ ತಿರುವನಂತಪುರಂ ಲೋಕಸಭಾ ಸಂಸದ ಶಶಿ ತರೂರ್ ಕಾಂಗ್ರೆಸ್ ಅಧ್ಯಕ್ಷ ರೇಸ್ನಲ್ಲಿದ್ದಾರೆ.
ದಕ್ಷಿಣ ಭಾರತದ ಇಬ್ಬರು ನಾಯಕರ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹೋರಾಟ ನಡೆಯಲಿದೆ. ನಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ. ಪಕ್ಷದ ಬಗ್ಗೆ ನನ್ನದೇ ಆದ ದೃಷ್ಟಿಕೋನವನ್ನು ಹೊಂದಿದ್ದೇನೆ ಎಂದು ಶಶಿ ತರೂರ್ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಸ್ಪಷ್ಟವಾಗಿ ಹೇಳಿದ್ದಾರೆ.