ನವದೆಹಲಿ: ಅಯೋಧ್ಯೆ ಶ್ರೀರಾಮಮಂದಿರಕ್ಕಾಗಿ ರಾಮರಥ ಯಾತ್ರೆ ನಡೆಸಿ, ದೇಶಾದ್ಯಂತ ಸಂಚಲನ ಉಂಟು ಮಾಡಿದ್ದ ಬಿಜೆಪಿಯ ಭೀಷ್ಮ ಎಂದೇ ಖ್ಯಾತರಾದ ಲಾಲ್ಕೃಷ್ಣ ಅಡ್ವಾಣಿ ಅವರು ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರಾದ ಕೃಷ್ಣ ಗೋಪಾಲ್, ರಾಮ್ ಲಾಲ್ ಹಾಗೂ ಅಲೋಕ್ ಕುಮಾರ್ ಅವರು ಅಡ್ವಾಣಿ ಅವರನ್ನು ಭೇಟಿ ಮಾಡಿ ಪ್ರತಿಷ್ಠಾಪನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಲೋಕ್ ಕುಮಾರ್, "ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಗಮಿಸುವ ಎಲ್.ಕೆ.ಅಡ್ವಾಣಿ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯ ಮತ್ತು ಇತರ ಸೌಲಭ್ಯವನ್ನು ಒದಗಿಸಲಾಗುವುದು" ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈಗಾಗಲೇ ಗಣ್ಯಾತಿಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಇದರ ಜೊತೆಗೆ ಎಲ್ಲಾ ಸಮುದಾಯದ ಸಾಧು-ಸಂತರಿಗೂ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಲಾಗಿದೆ.
ಅಡ್ವಾಣಿಗೆ ತಡವಾಗಿ ಬಂದಿದ್ದ ಆಹ್ವಾನ:ರಾಮಮಂದಿರಕ್ಕಾಗಿ ಹೋರಾಡಿದ ಧೀಮಂತ ನಾಯಕರಲ್ಲಿ ಮುಂಚೂಣಿಯಲ್ಲಿರುವ ಅಡ್ವಾಣಿ ಅವರಿಗೆ ಉದ್ಘಾಟನಾ ಕಾರ್ಯಕ್ರಮದ ಆಹ್ವಾನ ತಡವಾಗಿ ಬಂದಿದ್ದು, ಟೀಕೆಗೆ ಗುರಿಯಾಗಿತ್ತು. ಬಳಿಕ ವಿಶ್ವಹಿಂದೂ ಪರಿಷತ್ ಖುದ್ದಾಗಿ ಅವರ ನಿವಾಸಕ್ಕೆ ತೆರಳಿ ಆಹ್ವಾನ ನೀಡಿತ್ತು. ವಯೋಸಹಜ ಕಾರಣಕ್ಕಾಗಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ ಎಂದು ಟ್ರಸ್ಟ್ ಹೇಳಿಕೊಂಡಿತ್ತು.