ಹೈದರಾಬಾದ್:ಕೋಟ್ಯಂತರ ಭಾರತೀಯರ ಕನಸು ಚಂದ್ರಯಾನ-3 ಇಂದು ಯಶಸ್ವಿಯಾಗಿದೆ. ಚಂದ್ರನ ಮೇಲೆ ಲ್ಯಾಂಡರ್ ವಿಕ್ರಮ್ ನಿರೀಕ್ಷೆಯಂತೆ ಸಾಫ್ಟ್ ಲ್ಯಾಂಡ್ ಆಗಿದೆ. ಇಡೀ ದೇಶವೇ ಸಂಭ್ರಮಾಚರಣೆಯಲ್ಲಿ ಮುಳುಗಿದೆ. ವಿಶ್ವದ ನಾನಾಕಡೆಗಳಿಂದ ಭಾರತಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಮಹೋನ್ನತ ಸಾಧನೆಗೆ ಇಸ್ರೋ ವಿಜ್ಞಾನಿಗಳನ್ನು ಮುಕ್ತಕಂಠದಿಂದ ಶ್ಲಾಘಿಸಲಾಗುತ್ತಿದೆ.
ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಎಕ್ಸ್ (ಹಿಂದಿನ ಟ್ವಿಟರ್) ಖಾತೆಯ ಮೂಲಕ ಇಸ್ರೋಗೆ ಅಭಿನಂದನೆ ತಿಳಿಸಿದ್ದು, 'ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳು, ಧನ್ಯವಾದಗಳು ಇಸ್ರೋ. ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ.. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು.. ಸಂಭ್ರಮಿಸಲು ಇದು ದಾರಿಯಾಗಲಿ' ಎಂದು ಬರೆದಿದ್ದಾರೆ.
ಸ್ಯಾಂಡಲ್ವುಡ್ ನಟ ಯಶ್, 'ಸದಾ ಪ್ರಯತ್ನಿಸುವವರೆಗೆ ಅಸಾಧ್ಯವಾದದು ಯಾವುದೂ ಇಲ್ಲ. ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲಾಂಡರ್ ಅನ್ನು ಭಾರತ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತವನ್ನು ಮುಂಚೂಣಿಯಲ್ಲಿರಿಸಿ ಎಲ್ಲಾ ಭಾರತೀಯರು ಹೆಮ್ಮ ಪಡುವಂತೆ ಮಾಡಿದ ಇಸ್ರೋಗೆ ಅಭಿನಂದನೆ' ಎಂದು ತಿಳಿಸಿದ್ದಾರೆ.
ನಟ ರಿಷಭ್ ಶೆಟ್ಟಿ, 'ಚಂದ್ರಯಾನ-3 ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಲ್ಯಾಂಡಿಂಗ್ ವಿಶ್ವಕ್ಕೆ ಭಾರತದ ಪರಾಕ್ರಮವನ್ನು ಪ್ರದರ್ಶಿಸುತ್ತದೆ' ಎಂದು ಎಕ್ಸ್ನಲ್ಲಿ ಹೇಳಿದ್ದಾರೆ.
ಟಾಲಿವುಡ್ ನಟ ಚಿರಂಜಿವಿ, 'ಇದು ಭಾರತಕ್ಕೆ ಸಂಪೂರ್ಣ ಮಹತ್ವದ ಸಾಧನೆ. ಚಂದ್ರಯಾನ 3 ಅಭೂತಪೂರ್ವ ಮತ್ತು ಅದ್ಭುತ ಯಶಸ್ಸನ್ನು ದಾಖಲಿಸಿ ಇತಿಹಾಸ ನಿರ್ಮಾಣವಾಗಿದೆ. ವೈಜ್ಞಾನಿಕ ಸಮುದಾಯ ಸಾಧಿಸಿದ ಮಹಾನ್ ಸಾಧನೆಯನ್ನು ರಾಷ್ಟ್ರವೇ ಆಚರಿಸುತ್ತಿದೆ' ಎಂದು ಬರೆದಿದ್ದಾರೆ.