ಹಲ್ದ್ವಾನಿ(ಉತ್ತರಾಖಂಡ): ಹಲ್ದ್ವಾನಿ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಸೀನಿಯರ್ ವಿದ್ಯಾರ್ಥಿಗಳ ಆದೇಶದಂತೆ ಜ್ಯೂನಿಯರ್ ವಿದ್ಯಾರ್ಥಿಗಳು ತಲೆ ಬೋಳಿಸಿಕೊಂಡು ಓಡಾಡುತ್ತಿದ್ದ ಘಟನೆಯೊಂದು ಮುನ್ನಲೆಗೆ ಬಂದಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಜ್ಯೂನಿಯರ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ 44 ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಂಬಿಬಿಎಸ್ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ವಿಡಿಯೋ ಕಾಲ್ ಮೂಲಕ ಹೇಳಿದ್ದಾರೆ. ಅಲ್ಲದೇ ಕೆಲವೊಂದು ವಿದ್ಯಾರ್ಥಿಗಳನ್ನು ತಮ್ಮ ರೂಮಿಗೆ ಕರೆದು ಬಿಳಿ ಕೋಟ್ ಸಮಾರಂಭ(White Coat Ceremony)ದ ಬಗ್ಗೆ ಮಾಹಿತಿ ನೀಡುವಂತೆಯೂ ಹೇಳಿದ್ದಾರೆ. ಈ ಬಗ್ಗೆ ಜೂನಿಯರ್ ವಿದ್ಯಾರ್ಥಿಯೊಬ್ಬರು ಪ್ರಾಂಶುಪಾಲರಿಗೆ ದೂರು ನೀಡಿದ್ದು, ಬಳಿಕ ಪ್ರಾಂಶುಪಾಲರು ಮತ್ತು ವಾರ್ಡನ್ ಹಾಸ್ಟೆಲ್ಗೆ ಆಗಮಿಸಿದ್ದಾರೆ.