ಚೆನ್ನೈ (ತಮಿಳುನಾಡು): ಹೊರ ರಾಜ್ಯದಿಂದ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು, ಕಸ್ಟಮ್ಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ನಡೆದಿದೆ. ಬುಧವಾರ ಈ ಘಟನೆ ನಡೆದಿದ್ದು ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಮಾನಯಾನ ಸಂಸ್ಥೆಯ ಒಡೆತನದ ಪಿಕ್‌ಅಪ್ ವಾಹನದಲ್ಲಿ ತಮ್ಮ ಸಾಮಗ್ರಿಗಳೊಂದಿಗೆ ಮಹಿಳೆ ಕುಳಿತಿದ್ದರು. ಅಲ್ಲಿಗೆ ಬಂದ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು, ಸಾಮಗ್ರಿಗಳ ಪರಿಶೀಲನೆಗೆ ಮುಂದಾಗಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆ, ನನ್ನ ವಸ್ತುಗಳನ್ನು ವಿನಾ ಕಾರಣ ಪರಿಶೀಲಿಸಲು ಚೆನ್ನೈ ವಿಮಾನ ನಿಲ್ದಾಣಕ್ಕೆ ಯಾವುದೇ ಅಧಿಕಾರವಿಲ್ಲ. ಪರಿಶೀಲಿಸಲು ನಾನು ಅವಕಾಶ ಮಾಡಿಕೊಡುವುದಿಲ್ಲ. ನನ್ನ ವಿರೋಧದ ಬಳಿಕವೂ ನೀವು ಪರಿಶೀಲಿಸಿದರೆ ಈ ಪಿಕ್ ಅಪ್ ವಾಹನದಿಂದ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಗೊಂದಲಕ್ಕೀಡಾದ ಅಧಿಕಾರಿಗಳು ಮಹಿಳೆಯ ಹೇಳಿಕೆಯ ಬಳಿಕವೂ ಪರಿಶೀಲನೆಗೆ ಮುಂದಾಗಿದ್ದಾರೆ. ಇದರಿಂದ ಕಸ್ಟಮ್ಸ್ ಅಧಿಕಾರಿ ಮತ್ತು ಮಹಿಳಾ ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತು ಜೋರಾಗುತ್ತಿದ್ದಂತೆ ಸಹ ಪ್ರಯಾಣಿಕರು ಕೂಡ ಮಹಿಳಾ ಪ್ರಯಾಣಿಕರಿಗೆ ಬೆಂಬಲ ಸೂಚಿಸಿ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದ ನಡೆಸಿದರು.