ಜಲ್ಪೈಗುರಿ(ಪಶ್ಚಿಮ ಬಂಗಾಳ):ಜಲಪೈಗುರಿಯಲ್ಲಿ ಸಣ್ಣ ಫಿರಂಗಿ ಸ್ಫೋಟಗೊಂಡಿದ್ದು, 7 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಜತೆಗೆ ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಲ್ಪೈಗುರಿ ಆಸ್ಪತ್ರೆ ಮತ್ತು ಉತ್ತರ ಬಂಗಾಳ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಕ್ಕಿಂ ಪ್ರವಾಹ ಹೆಚ್ಚಾಗಿದ್ದರಿಂದ ಪ್ರವಾಹ ನೀರಿನಲ್ಲಿ ಸೇನೆಯ ಮಾರ್ಟರ್ ಶೆಲ್ಗಳು ಬಾಕ್ಸ್ ಸಮೇತ ಕೊಚ್ಚಿ ಹೋಗಿದ್ದವು. ಈ ಪೆಟ್ಟಿಗೆ ತೀಸ್ತಾ ನದಿಯಲ್ಲಿ ತೇಲಿ ಬಂದಿತ್ತು. ಇದನ್ನು ಕಂಡ ಬಾಲಕರು ಶೆಲ್ನ್ನು ಒಳಗೊಂಡಿದ್ದ ಬಾಕ್ಸ್ ಅನ್ನು ಮನೆಗೆ ತೆಗದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಅದನ್ನು ತೆರದಿದ್ದು ಈ ವೇಳೆ ಶೆಲ್ ಸಿಡಿದಿದೆ. ಪರಿಣಾಮ 7 ವರ್ಷದ ಬಾಲಕ ಸಾವನ್ನಪ್ಪಿದ್ದು ಹಾಗೂ ಅಲ್ಲೇ ಇದ್ದ ಐವರು ಗಾಯಗೊಂಡಿದ್ದಾರೆ. ಜಲ್ಪೈಗುರಿ ಜಿಲ್ಲೆಯ ಕ್ರಾಂತಿ ಬ್ಲಾಕ್‌ನ ಚಂಪದಂಗ ಪ್ರದೇಶದಲ್ಲಿ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ.
ಹೂಡಾ ಸೈನೂರ್ ಆಲಂ (7 ವರ್ಷ) ಸ್ಫೋಟದಲ್ಲಿ ಸಾವನ್ನಪ್ಪಿದ ಬಾಲಕ. ಲತೀಫಾ ಖಾತುನ್, ಲಾಕು ಆಲಂ (14 ವರ್ಷ), ರುಕ್ಸಾನಾ ಪರ್ವೀನ್, ರಂಜಾನ್ ಅಲಿ (65 ವರ್ಷ), ಗುಮೇರ್ ಅಲಿ (50 ವರ್ಷ) ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ಕುರಿತು ಜಲ್ಪೈಗುರಿ ಶಾಸಕ ಪ್ರದೀಪ್ ಕುಮಾರ್ ಬರ್ಮಾ, "ಇದು ಅತ್ಯಂತ ದುರದೃಷ್ಟಕರ ಘಟನೆ. ಸಿಕ್ಕಿಂನಿಂದ ಹಾರಿಹೋಗಿದ್ದ ಸೇನೆಯ ಮಾರ್ಟರ್ ಶೆಲ್ನ್ನು ಜನರು ನದಿಯಿಂದ ಹೊರತೆಗೆದಿದ್ದಾರೆ. ಬಳಿಕ ಮನೆಗೆ ಹೋಗಿ ಅದನ್ನು ತೆರೆಯಲು ಪ್ರಯತ್ನಿಸಿದಾಗ ಅದು ಸ್ಫೋಟಗೊಂಡಿದೆ. ಈ ಘಟನೆಯಲ್ಲಿ 6 ಜನರು ಗಾಯಗೊಂಡಿದ್ದಾರೆ. ಅದರಲ್ಲಿ ಒಂದು ಮಗು ಸಾವನ್ನಪ್ಪಿದೆ ಮತ್ತು ಗಾಯಾಳುಗಳು ಜಲ್ಪೈಗುರಿ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಜಲ್ಪೈಗುರಿ ಡಿಎಸ್ಪಿ ಬಿಕ್ರಮ್ ಜೀತ್ ಲಾಮಾ ಮಾತನಾಡಿ, ಸ್ಫೋಟ ಸಂಭವಿಸಿದೆ. ಎಷ್ಟು ಶೆಲ್ಗಳು ಇದ್ದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣ ತನಿಖೆಯಲ್ಲಿದೆ. ಸೇನೆಗೆ ಕೂಡ ಮಾಹಿತಿ ನೀಡಲಾಗಿದೆ ಎಂದರು. ಘಟನಾ ಸ್ಥಳದ ಕ್ರಾಂತಿ ಚಂಪದಂಗ ನಿವಾಸಿ ತಬೀಬುರ್ ರೆಹಮಾನ್ “ನಮ್ಮಲ್ಲಿ ಕೆಲವರು ತೀಸ್ತಾ ನದಿಯ ಬಳಿ ಮರವನ್ನು ಸಂಗ್ರಹಿಸುತ್ತಿದ್ದಾಗ ನೀರಿನಲ್ಲಿ ಪೆಟ್ಟಿಗೆಯನ್ನು ಕಂಡೆವು. ನಾವು ಅದನ್ನು ಮನೆಗೆ ತಂದಿದ್ದೇವೆ ಮತ್ತು ಪೆಟ್ಟಿಗೆಯೊಳಗಿನ ಲೋಹದ ವಸ್ತುವಿನಿಂದ ಸಾಕಷ್ಟು ಹಣವನ್ನು ಪಡೆಯಬಹುದು ಎಂದು ಕೆಲವರು ಸಲಹೆ ನೀಡಿದರು ಎಂದು ಘಟನೆ ಬಗ್ಗೆ ವಿವರಿಸಿದ್ದಾರೆ. ಸದ್ಯ ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ಸಿಕ್ಕಿಂ ಮೇಘಸ್ಪೋಟ : 14 ಜನರ ಸಾವು, 100ಕ್ಕೂ ಹೆಚ್ಚು ಜನರು ನಾಪತ್ತೆ.. ಬಂಗಾಳದಲ್ಲಿ 10,000 ಮಂದಿ ಸ್ಥಳಾಂತರ