ನವದೆಹಲಿ: ದೇಶಾದ್ಯಂತ ಸದ್ಯ ತಂಪು ವಾತಾವರಣ. ಹಲವೆಡೆ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದ್ದು, ಮೈಕೊರೆಯುವ ಚಳಿಗೆ ಜನಸಾಮಾನ್ಯರು ತತ್ತರಿಸಿದ್ದಾರೆ. ದೆಹಲಿ - ಎನ್‌ಸಿಆರ್ ಪ್ರದೇಶದಲ್ಲಿ ಇಂದು ಮುಂಜಾನೆ ದಟ್ಟ ಮಂಜಿನ ವಾತಾವರಣ ಸೃಷ್ಟಿಯಾಗಿತ್ತು. ರಾಷ್ಟ್ರ ರಾಜಧಾನಿಯಲ್ಲಿನ ತಾಪಮಾನ ಸುಮಾರು 7 ಡಿಗ್ರಿಗೆ ಕುಸಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯ ಇಂಡಿಯಾ ಗೇಟ್, ಸರಾಯ್ ಕಲೇ ಖಾನ್, ಏಮ್ಸ್, ಸಫ್ದರ್‌ಜಂಗ್ ಮತ್ತು ಆನಂದ್ ವಿಹಾರ್ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಗೋಚರತೆ ಬಹಳ ಕಡಿಮೆ ಪ್ರಮಾಣದಲ್ಲಿತ್ತು. ದಟ್ಟ ಮಂಜಿನ ವಾತಾವರಣ ಸೃಷ್ಟಿಯಾದ ಹಿನ್ನೆಲೆ, ಗೋಚರತೆ ಕಡಿಮೆ ಆಗಿತ್ತು. ಮಧ್ಯರಾತ್ರಿ ಚಳಿ ತೀವ್ರಗೊಂಡ ಹಿನ್ನೆಲೆ ರಾಷ್ಟ್ರ ರಾಜಧಾನಿಯ ವಿವಿಧ ಭಾಗಗಳಲ್ಲಿ ನಿವಾಸಿಗಳು ರಾತ್ರಿ ತಂಗುದಾಣ (ನೈಟ್ ಶೆಲ್ಟರ್) ನಲ್ಲಿ ಆಶ್ರಯ ಪಡೆದರು.
ಇಂದು ಬೆಳಗ್ಗೆ ಐ.ಎಂ.ಡಿ. ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿನ ಮಂಜಿನ ವಾತಾವರಣವುಳ್ಳ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಯುಪಿಯ ಮೊರಾದಾಬಾದ್, ಕಾನ್ಪುರದ ಫೋಟೋಗಳು ದಟ್ಟ ಮಂಜಿನ ಪದರ ಹೊಂದಿತ್ತು. ಗೋಚರತೆ ಬಹುತೇಕ ಶೂನ್ಯ ಹಂತಕ್ಕೆ ತಲುಪಿದಂತೆ ತೋರಿದೆ.
ಮಬ್ಬಿನ ವಾತಾವರಣದಿಂದ ರಸ್ತೆಯನ್ನು ನೋಡುವುದೇ ಕಷ್ಟವಾಗಿದೆ. ಎಂದಿನಂತೆ ಇಂದು ಬೆಳಗ್ಗೆ ವಾಹನ ಸವಾರರ ಸಂಖ್ಯೆ ತೀರಾ ಕಡಿಮೆ ಇತ್ತು. ಬೆಳ್ಳಂಬೆಳಗ್ಗೆ ವಾಹನಗಳೇ ಕಂಡಿಲ್ಲ. ಕಡಿಮೆ ಗೋಚರತೆ ಮತ್ತು ತೀರಾ ತಂಪು ವಾತಾವರಣ ಇರುವ ಕಾರಣ ಈ ಸಮಯದಲ್ಲಿ ವಾಹನಗಳ ಓಡಾಟ ಅಪಾಯಕಾರಿ ಎಂದು ಮೊರಾದಾಬಾದ್‌ನ ರಿಕ್ಷಾ ಚಾಲಕರೊಬ್ಬರು ತಿಳಿಸಿದ್ದಾರೆ.