ಕೊಪ್ಪಳ: ಸೀರೆಯ ಒಂದೊಂದು ನೆರಿಗೆಯನ್ನೂ ನಯ, ನಾಜೂಕಾಗಿ ಸರಿ ಮಾಡ್ತಿದಾರೆ. ಮುಖದಲ್ಲಿ ಮುಂಗುರುಳ ಬಿದ್ದಾವೇನೋ ಅಂತಾ ಕೇಶರಾಶಿ ನೀಟಾಗಿಸ್ತಿದಾರೆ. ಮಡದಿಯನ್ನ ತಯಾರು ಮಾಡೋದರಲ್ಲಿ ಅದೆಂಥ ಖುಷಿ, ಎಷ್ಟೊಂದು ಆಸ್ತೆ ನೋಡಿ ಇವರಿಗೆ. ಅಸಲಿಗೆ ಇವರೊಬ್ಬ ಅಪರೂಪದ ಗಂಡ.
ಅಪ್ಪನಿಗಿಂತ ಮಕ್ಕಳೇನು ಕಡಿಮೆನಾ.. ಅಮ್ಮನನ್ನ ಅಕ್ಕರೆಯಿಂದಲೇ ರೆಡಿ ಮಾಡ್ತಿದ್ದಾರೆ. ಪಾದಕ್ಕೆ ಹೂಗಳನ್ನ ಹಾಕ್ತಿದಾರೆ. ಆಮೇಲೆ ಒಂದ್ ಫ್ಯಾಮ್ಲಿ ಗ್ರುಪ್ ಫೋಟೋ.. ಇದೆಲ್ಲ ಸರಿ, ಅಮ್ಮಾವ್ರು ಯಾಕೆ ಒಂದೇ ಮುಖಭಾವದಲ್ಲಿದಾರೆ ಅಂತೀರಲ್ವೇ.. ಅದೇ ಇಲ್ಲಿನ ಇಂಟ್ರೆಸ್ಟಿಂಗ್.. ಮಡದಿ ನೆನಪಿಗಾಗಿ ಪತಿರಾಯ ಎದೆಯ ಅರಸಿಯ ಸಿಲಿಕಾನ್ ಮೂರ್ತಿಯನ್ನೇ ಮನೆಯಲ್ಲಿ ಮಾಡಿಸಿದ್ದಾರೆ. ಆ ಮೂಲಕ ಈ ಮನೆಯವರೆಲ್ಲ ತಮ್ಮ ಪ್ರತಿ ಉಸಿರಿನಲ್ಲೂ ಇವರನ್ನ ಜೀವಂತವಾಗಿಸಿಕೊಂಡಿದ್ದಾರೆ.
ಮಡದಿ ನೆನಪಿಗಾಗಿ ಮೂರ್ತಿ ಮಾಡಿಸಿದ ಪತಿರಾಯ ಕೊಪ್ಪಳ ಭಾಗ್ಯನಗರದ ಉದ್ಯಮಿ ಕೆ. ಶ್ರೀನಿವಾಸ್ ಗುಪ್ತಾ ಎಂಬುವರ ಹೊಸ ಮನೆಯಿದು. ಇವರ ಪತ್ನಿ ಕೆವಿಎನ್ ಮಾಧವಿ ಅವರು 2017ರ ಜುಲೈ 5ರಂದು ತಿರುಪತಿಗೆ ತೆರಳಿದ್ದಾಗ ಕಾರ್ ಅಪಘಾತದಲ್ಲಿ ಕೋಲಾರ ಬಳಿ ಸಾವನ್ನಪ್ಪಿದ್ದರು. ಕೊಪ್ಪಳದ ರೈಲ್ವೆ ಗೇಟ್ ಬಳಿಯ ಅಪಾರ್ಟ್ಮೆಂಟ್ ಬಳಿ ಹೊಸಮನೆ ಕಟ್ಟಿಸಬೇಕೆಂಬ ಕನಸು ಮಾಧವಿಯವರಿಗಿತ್ತಂತೆ. ಅಮ್ಮಾವ್ರು ಅಂದ್ಕೊಂಡಂತೆಯೇ ಮನೆ ಕಟ್ಟಿಸಿ ಓಪನಿಂಗ್ ಮಾಡಿದಾರೆ ಗುಪ್ತಾ. ಭಾವನಾತ್ಮಕವಾಗಿ ಕುಟುಂಬದ ಜತೆಗಿರಲೆಂದು ಪತ್ನಿಯ ಮೂರ್ತಿ ಮಾಡಿಸಿದ್ದಾರೆ.
ಬೆಂಗಳೂರಿನ ಬೊಂಬೆ ಮನೆ ಕಲಾವಿದ ಶ್ರೀಧರಮೂರ್ತಿ ಸಿಲಿಕಾನ್ ಇಂಪೋರ್ಟೆಡ್ ಮಟಿರಿಯಲ್ ಬಳಸಿ ಈ ಮೂರ್ತಿಗೆ ಜೀವ ಕೊಟ್ಟಿದಾರೆ. ಮನುಷ್ಯರಂತೆಯೇ ಬೆರಳು ಫ್ಲೆಕ್ಸಿಬಲ್ ಆಗಿವೆ. ಸುಮಾರು 15 ರಿಂದ 20 ಕೆಜಿ ತೂಕದ ಕಲಾಕೃತಿಗೆ ನಿಜ ಕೂದಲನ್ನೇ ಬಳಸಿ ವಿಗ್ ತಯಾರಿಸಲಾಗಿದೆ.
ಗುಪ್ತಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿವೆ. ತಾಯಿಯ ಅಗಲಿಕೆ ಅರಗಿಸಿಕೊಳ್ಳದ ಅವರಿಗೀಗ ಹೆತ್ತವಳ ಪ್ರತಿಬಿಂಬದಿಂದಾಗಿ ಹೆತ್ತವಳೊಂದಿಗೇ ಇರುವ ಭಾವ ಮೂಡುತ್ತಿದೆ. ಭೌತಿಕ ಅಗಲಿಕೆ ಬಳಿಕವೂ ನೆನಪುಗಳು ಕೆಲವರಲ್ಲಿ ಜೀವಂತವಿರುತ್ತವೆ. ನಿಜ ಪ್ರೀತಿ ಇದ್ದವರಲ್ಲಿ ಅವು ಶಾಶ್ವತ. ಆದರೆ, ಗುಪ್ತಾ ಪರಿವಾರದಲ್ಲಿ ಮಾಧವಿ ಅವರ ಸ್ಮರಣೆ ಜತೆಗೆ ಅವರ ಪ್ರತಿಬಿಂಬ ಸದಾ ಜೀವಂತಿಕೆಯಿಂದಿರುತ್ತೆ..