ಮಧುರೈ(ತಮಿಳುನಾಡು):ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಮಧುರೈ ಕೋರ್ಟ್ನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇದೀಗ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ. ಮಧುರೈ ಜಿಲ್ಲಾ ಕೋರ್ಟ್ನಲ್ಲಿ ಮೊಹಮ್ಮದ್ ರಸ್ವಿ ಎಂಬ ವಕೀಲರು ಈ ಪ್ರಕರಣ ದಾಖಲು ಮಾಡಿದ್ದಾರೆ. ರಾಹುಲ್ ಗಾಂಧಿ ಜೊತೆಗೆ ಸಂಸದರಾದ ಮಾಣಿಕ್ಕಂ ಟ್ಯಾಗೋರ್ ಹಾಗೂ ಕೆ.ಸಿ. ವೇಣುಗೋಪಾಲ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಏನಿದು ಪ್ರಕರಣ!?
ಕಳೆದ ತಿಂಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸೆಕ್ಷನ್ 302, 376 ಮತ್ತು 506 ಅಡಿ ದೂರು ದಾಖಲಾಗಿತ್ತು.
ಸಂತ್ರಸ್ತೆ ಕುಟುಂಬಸ್ಥರ ಭೇಟಿ ಮಾಡಿದ್ದ ರಾಹುಲ್ ಗಾಂಧಿ ಅವರಿಗೆ ಸಾಂತ್ವನ ಹೇಳಿದ ಬಳಿಕ ಅವರೊಂದಿಗಿನ ಫೋಟೋ ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನ ಕಾಂಗ್ರೆಸ್ ಸಂಸದ ಟ್ಯಾಗೋರ್ ಹಾಗೂ ವೇಣುಗೋಪಾಲ ಕೂಡ ಹಂಚಿಕೊಂಡಿದ್ದರು. ಇದು ಹೆಚ್ಚಿನ ವಿವಾದಕ್ಕೆ ಕಾರಣವಾಗಿತ್ತು. ತದನಂತರ ರಾಹುಲ್ ಗಾಂಧಿ ಫೋಟೋ ಡಿಲೀಟ್ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಸ್ಪಷ್ಟೀಕರಣ ನೀಡುವಂತೆ ಕೇಳುವ ಸಾಧ್ಯತೆ ಇದೆ.
ಇದನ್ನೂ ಓದಿರಿ: ತಾಲಿಬಾನ್ ಮುಖ್ಯಸ್ಥನ ಭೇಟಿಯಾದ ಮಸೂದ್ ಅಜರ್.. ಕಾಶ್ಮೀರ ವಶಕ್ಕೆ ಸಹಾಯ?
ಬಾಲಕಿ ಪೋಷಕರ ಭೇಟಿ ಮಾಡಿದ್ದ ರಾಹುಲ್ ಗಾಂಧಿ, ಬಾಲಕಿ ಈ ದೇಶದ ಮಗಳು. ಅವಳ ಸಾವಿಗೆ ನ್ಯಾಯ ಸಿಗಬೇಕು. ಆಕೆಯ ಪಾಲಕರ ಜತೆ ನಾನು ಸದಾ ನಿಲ್ಲುತ್ತೇನೆ ಎಂದು ಬರೆದು, ಫೋಟೋ ಶೇರ್ ಮಾಡಿದ್ದರು. ಆದರೆ, ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಫೋಟೋ ಡಿಲೀಟ್ ಮಾಡಿದ್ದರು.