ನವದೆಹಲಿ:ಕೋವಿಡ್-19 ಲಸಿಕೆಗಾಗಿ ಅಮೆರಿಕ, ಬ್ರೆಜಿಲ್ ಸೇರಿ 92 ದೇಶಗಳು ಭಾರತವನ್ನು ಸಂಪರ್ಕಿಸಿದ್ದು, ವಿಶ್ವದಲ್ಲೇ ಅತಿ ವಿಶ್ವಾಸವಿರುವ ವ್ಯಾಕ್ಸಿನ್ ಎಂಬುದನ್ನು ಈ ಮೂಲಕ ರುಜುವಾತುಪಡಿಸಿವೆ. ಇದು ಭಾರತದ ಶಕ್ತಿ ಸಾಮರ್ಥ್ಯ ಎಂತಹದ್ದು ಎಂಬುದನ್ನು ಎತ್ತಿತೋರಿಸುತ್ತದೆ.
ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಪ್ರಾರಂಭವಾದಾಗಿನಿಂದ ಭಾರತ ಅಭಿವೃದ್ಧಿಪಡಿಸಿರುವ ಲಸಿಕೆಯು ಹೆಚ್ಚು ಅಡ್ಡಪರಿಣಾಮ ಬೀರುತ್ತಿದೆ ಎಂಬ ಸುಳ್ಳು ಸಂದೇಶಗಳು ಹರಡಿದ್ದೇ ಹೆಚ್ಚು. ಈ ಬೆನ್ನಲ್ಲೇ ಈಗ 92 ದೇಶಗಳು ಭಾರತವನ್ನು ಸಂಪರ್ಕಿಸಿ, ನೀವು ಅಭಿವೃದ್ಧಿಪಡಿಸಿದ ಲಸಿಕೆ ನಮಗೂ ನೀಡಿ ಎಂದು ಮನವಿ ಮಾಡಿಕೊಂಡಿವೆ.
ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ನೇಪಾಳ, ಬಾಂಗ್ಲಾದೇಶ, ಮಯನ್ಮಾರ್ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ಕಳುಹಿಸುತ್ತಿದೆ. ಡೊಮಿನಿಕನ್ ಗಣರಾಜ್ಯದ ಪ್ರಧಾನಿ ರೂಸ್ವೆಲ್ಟ್ ಸ್ಕೆರಿಟ್ ಅವರು ಕೂಡ ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಲಸಿಕೆ ನೀಡುವಂತೆ ಕೋರಿದ್ದಾರೆ.
ಇದನ್ನೂ ಓದಿ...ಹೋಗಿ ಬಾ ಪ್ರೀತಿಯ ಗಜರಾಜ..! ಕಲ್ಲು ಹೃದಯವನ್ನೂ ಕರಗಿಸುವ ದೃಶ್ಯ
ದೇಶದ (ಡೊಮಿನಿಕನ್ ಗಣರಾಜ್ಯ) 72,100 ಜನಸಂಖ್ಯೆಗೆ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯು ತುರ್ತು ಅಗತ್ಯವಿದೆ. ಆದ್ದರಿಂದ, ನೀವು ಸಹಾಯ ಮಾಡುವಂತೆ ನಮ್ರತೆಯಿಂದ ವಿನಂತಿಸುತ್ತಿದ್ದೇನೆ. ನಮ್ಮ ದೇಶದ ಜನರ ಸುರಕ್ಷತೆಗೆ ನಿಮ್ಮ ಸಹಾಯ ಅತ್ಯಮೂಲ್ಯವಾದದ್ದು ಎಂದು ಸ್ಕೆರಿಟ್ ಪತ್ರದಲ್ಲಿ ಬರೆದಿದ್ದಾರೆ.
ಅಮೆರಿಕ, ಭಾರತ ನಂತರ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ಹೊಂದಿರುವ ಬ್ರೆಜಿಲ್ ದೇಶವು ಪುಣೆಯಿಂದ ಲಸಿಕೆ ಪಡೆಯಲು ವಿಶೇಷ ವಿಮಾನವನ್ನು ಭಾರತಕ್ಕೆ ಕಳುಹಿಸಿದ್ದು, ಬ್ರಿಟನ್ ಸರ್ಕಾರ 2 ಮಿಲಿಯನ್ ಪ್ರಮಾಣದ ಲಸಿಕೆಯನ್ನು ಖರೀದಿಸಿದೆ.
ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ಅಭಿವೃದ್ಧಿಪಡಿಸಿದ ಲಸಿಕೆ ಮತ್ತು ಚೀನಾದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದ ಒಂದು ಲಸಿಕೆಯನ್ನು ತುರ್ತಾಗಿ ಬಳಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲು ಬ್ರೆಜಿಲ್‌ನ ರಾಷ್ಟ್ರೀಯ ಆರೋಗ್ಯ ಕಣ್ಗಾವಲು ಸಂಸ್ಥೆ (ಆನ್ವಿಸ್ವಾ) ಭಾನುವಾರದಂದು ಸಭೆ ನಿಗದಿಪಡಿಸಿದೆ. ಬೊಲಿವಿಯನ್ ಸರ್ಕಾರವು 5 ಮಿಲಿಯನ್ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆ ಖರೀದಿಸುವುದಾಗಿ ಸೀರಮ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.