ಹೈದರಾಬಾದ್:ಬಿರಿಯಾನಿ.. ಈ ಹೆಸರೇ ಸಾಕು ಭಕ್ಷ್ಯಪ್ರಿಯರ ಬಾಯಲ್ಲಿ ನೀರೂರುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೇಶದಲ್ಲಿ ವಿವಿಧ ಬಗೆಯ ಬಿರಿಯಾನಿಗಳನ್ನು ತಯಾರಿಸಲಾಗುತ್ತದೆ. ಆದರೆ, ಹೈದರಾಬಾದ್‌ನ ವಿದ್ಯಾನಗರದಲ್ಲಿರುವ 'ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್' ಒಂದೆರಡಲ್ಲ, ಬರೋಬ್ಬರಿ 75 ಬಗೆಯ ವೆಜ್ ಮತ್ತು ನಾನ್ ವೆಜ್ ಬಿರಿಯಾನಿಗಳನ್ನು ತಯಾರಿಸಿ ದಾಖಲೆ ನಿರ್ಮಿಸಿದೆ.
ಹೈದರಾಬಾದ್‌ನ ವಿದ್ಯಾನಗರದಲ್ಲಿರುವ 'ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್' 50 ವರ್ಷಗಳನ್ನು ಪೂರೈಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಈ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ 'ಆಜಾದಿ ಕಾ ಅಮೃತ್ ಮಹೋತ್ಸವ' ಆಯೋಜಿಸುತ್ತಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ಗೌರವಾರ್ಥವಾಗಿ ಮತ್ತು ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ ಹೋಟೆಲ್ ಆಡಳಿತ ಮಂಡಳಿ ವಿಭಿನ್ನ ಪ್ರಯತ್ನ ಮಾಡುವ ಮೂಲಕ ದಾಖಲೆ ಮಾಡಿದೆ.
2 ತಿಂಗಳ ಕಾಲ ಸಂಶೋಧನೆ: ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 75 ವಿಧದ ಬಿರಿಯಾನಿ ತಯಾರಿಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ದೇಶದ ಹಲವು ಬಗೆಯ ಬಿರಿಯಾನಿಗಳು, ವಿವಿಧೆಡೆ ಜನಪ್ರಿಯವಾಗಿರುವ ಬಿರಿಯಾನಿಗಳು, ತಯಾರಿಸುವ ಬಗೆ ಕುರಿತು 2 ತಿಂಗಳ ಕಾಲ ಸಂಶೋಧನೆ ನಡೆಸಿದ್ದರು.