ಉದಯಪುರ(ರಾಜಸ್ಥಾನ): ಒಂದೇ ಕುಟುಂಬದ 6 ಮಂದಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೋಗುಂಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಂಪತಿ ಸೇರಿ 6 ಜನರ ಮೃತದೇಹ ಪತ್ತೆಯಾಗಿವೆ.
ಮೃತರನ್ನು ಪ್ರಕಾಶ್ ಗಮೇಟಿ, ಪತ್ನಿ ದುರ್ಗಾ, ಪ್ರಕಾಶ್ ತಂದೆ ಸೋಹನ್ ಲಾಲ್ ಗಮೇಟಿ, ಮಕ್ಕಳಾದ ಗಣೇಶ್ (5), ಪುಷ್ಕರ್(4), ರೋಷನ್(2) ಮತ್ತು 4 ತಿಂಗಳ ಹಸುಗೂಸು ಗಂಗಾರಾಮ್ ಎಂದು ಗುರುತಿಸಲಾಗಿದೆ.
ಪ್ರಕಾಶ್ ಮನೆಯಲ್ಲಿ ಯಾವುದೇ ಚಲನವಲನ ಕಾಣದಿದ್ದಾಗ ಅಕ್ಕಪಕ್ಕದ ನಿವಾಸಿಗಳು ಹೋಗಿ ನೋಡಿದ್ದಾರೆ. ಈ ವೇಳೆ ಮನೆಮಂದಿಯ ಮೃತದೇಹಗಳು ಕಂಡಿದ್ದು, ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ 3 ತಿಂಗಳ ಹಿಂದೆ ಪ್ರಕಾಶ್ ಸೂರತ್ನಿಂದ ಮನೆಗೆ ಬಂದಿದ್ದು, ಮಾನಸಿಕವಾಗಿ ನೊಂದಿದ್ದರು ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಪ್ರತಿಕ್ರಿಯಿಸಿರುವ ಎಸ್ಪಿ ವಿಕಾಸ್ ಶರ್ಮಾ, ಪ್ರಾಥಮಿಕ ಹಂತದಲ್ಲಿ ಇದು ಆತ್ಮಹತ್ಯೆ ಎಂಬುದಾಗಿ ಕಂಡುಬಂದಿದೆ. ಪ್ರಕಾಶ್ ಐವರನ್ನು ಕತ್ತು ಹಿಸುಕಿ ಸಾಯಿಸಿ ಆ ಬಳಿಕ ನೇಣು ಬಿಗಿದುಕೊಂಡಿದ್ದಾನೆ ಎಂದಿದ್ದಾರೆ. ಸದ್ಯ ಪೊಲೀಸರು, ಶ್ವಾನದಳ ಹಾಗೂ ಎಫ್‌ಎಸ್‌ಎಲ್ ತಂಡವನ್ನು ಸ್ಥಳಕ್ಕೆ ಕರೆಸಿ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಒದಿ:ಹಣವಿಲ್ಲದೆ ತಾಯಿಯ ಅಂತ್ಯಸಂಸ್ಕಾರಕ್ಕೆ ಬರಲಾಗದ ಮಗಳು: ವಿಡಿಯೊ ಕಾಲ್ನಲ್ಲೇ ಅಂತಿಮ ದರ್ಶನ!