ತಿರುಚ್ಚಿ (ತಮಿಳುನಾಡು):ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈ, ಸಿಂಗಾಪುರ, ಮಲೇಷ್ಯಾ, ಶ್ರೀಲಂಕಾ ಮುಂತಾದೆಡೆಗೆ ಪ್ರತಿನಿತ್ಯ ವಿಮಾನಯಾನ ಸೇವೆ ಇದೆ. ಕೆಲ ಪ್ರಯಾಣಿಕರು ಚಿನ್ನಾಭರಣ ಕಳ್ಳಸಾಗಣೆ ಮಾಡುವಾಗ ಅವರನ್ನು ಹಿಡಿದು ಅಧಿಕಾರಿಗಳು ವಶಪಡಿಸಿಕೊಳ್ಳುವ ಕಾರ್ಯಚರಣೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ಅಕ್ರಮಗಳನ್ನು ತಡೆಯಲು ಅಧಿಕಾರಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿನ್ನೆ (ಜು.30) ಮಲೇಷ್ಯಾ ರಾಜಧಾನಿ ಕೌಲಾಲಂಪುರದಿಂದ 'ಮಲಿಂಡೋ ಏರ್' ವಿಮಾನ ತಿರುಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ತಿರುಚ್ಚಿ ಕಸ್ಟಮ್ಸ್ ಅಧಿಕಾರಿಗಳು ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಅವರ ವಸ್ತುಗಳನ್ನು ಸಾಮಾನ್ಯ ಶೋಧ ನಡೆಸಿದಾಗ ಬೆಚ್ಚಿಬೀಳುವ ಸಂಗತಿಯೊಂದು ಹೊರ ಬಂದಿದೆ.
ಹೌದು, ಟ್ರಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ 47 ಜೀವಂತ ಹೆಬ್ಬಾವು ಮತ್ತು 2 ಹಲ್ಲಿಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಪ್ರಯಾಣಿಕರೊಬ್ಬನನ್ನು ತಿರುಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಮೊಯಿದ್ದಿನ್ ಎಂದು ಗುರುತಿಸಲಾಗಿದ್ದು, ಈತ ಕೌಲಾಲಂಪುರದಿಂದ ಬಾಟಿಕ್ ಏರ್ ವಿಮಾನದ ಮೂಲಕ ವಿಮಾನ ನಿಲ್ದಾಣಕ್ಕೆ ಭಾನುವಾರ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಮೊಹಮ್ಮದ್ನ ಬ್ಯಾಗ್‌ಗಳಲ್ಲಿ ಅನುಮಾನಾಸ್ಪದ ಸಂಗತಿಯನ್ನು ಗಮನಿಸಿ ಎಚ್ಚೆತ್ತ ಕಸ್ಟಮ್ಸ್ ಅಧಿಕಾರಿಗಳು ಸಂಪೂರ್ಣ ತಪಾಸಣೆ ನಡೆಸಲು ನಿರ್ಧರಿಸಿದ್ದಾರೆ. ಟ್ರಾಲಿ ಬ್ಯಾಗ್ ಓಪನ್ ಮಾಡಿದಾಗ ಹಲವಾರು ಸಣ್ಣ ಬಾಕ್ಸ್ನಲ್ಲಿ ಅಡಗಿಸಿಟ್ಟಿದ್ದ ವಿವಿಧ ಜಾತಿಗಳು ಜೀವಂತ ಸರೀಸೃಪಗಳನ್ನು ಕಂಡು ಬೆಚ್ಚಿಬಿದ್ದರು. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಅರಣ್ಯಾಧಿಕಾರಿಗಳನ್ನು ವಿಮಾನ ನಿಲ್ದಾಣಕ್ಕೆ ಕರೆಸಿದ್ದಾರೆ. ಅವರು ಸುಮಾರು 47 ಹೆಬ್ಬಾವು ಮತ್ತು 2 ಹಲ್ಲಿಗಳನ್ನು ಸುರಕ್ಷಿತವಾಗಿ ವಶಪಡಿಸಿಕೊಂಡರು.