ಲಖನೌ(ಉತ್ತರ ಪ್ರದೇಶ) :ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ 403 ಕ್ಷೇತ್ರಗಳಿಗೆ ನಿನ್ನೆಯಿಂದ ಮತದಾನ ಆರಂಭವಾಗಿದೆ. ಮಾರ್ಚ್ 7ರವರೆಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ನಿನ್ನೆ ಮೊದಲನೇ ಹಂತದ ಮತದಾನ ನಡೆದಿದ್ದು, ಶೇ.57.79 ರಷ್ಟು ವೋಟಿಂಗ್ ಆಗಿದೆ.
ಫೆಬ್ರವರಿ 14ರಂದು 2ನೇ ಹಂತದ ಮತದಾನ ನಡೆಯಲಿದೆ. ಇದಕ್ಕೂ ಮುನ್ನ, ಶೇ. 25ರಷ್ಟು ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಈ ಪೈಕಿ ಶೇ.19ರಷ್ಟು ಮಂದಿ ಕೊಲೆ, ದರೋಡೆಗಳಂತಹ ಪ್ರಕರಣಗಳಲ್ಲಿ ಕಳಂಕಿತರಾಗಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಯುಪಿ ಎಲೆಕ್ಷನ್ ವಾಚ್ ಹೇಳಿದೆ.
2ನೇ ಹಂತದಲ್ಲಿ 9 ಜಿಲ್ಲೆಗಳಲ್ಲಿ 55 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಅಮ್ರೋಹಾ, ಬರೇಲಿ, ಬಿಜ್ನೋರ್, ಬದೌನ್, ಮೊರಾದಾಬಾದ್, ರಾಂಪುರ, ಸಹರಾನ್‌ಪುರ, ಸಂಭಾಲ್ ಮತ್ತು ಶಹಜಹಾನ್‌ಪುರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಎಡಿಆರ್, ಅಭ್ಯರ್ಥಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಬಹಿರಂಗಪಡಿಸುವಾಗ ಶೇ.45ರಷ್ಟು ಅಭ್ಯರ್ಥಿಗಳು ಕೋಟ್ಯಧಿಪತಿಗಳು ಎಂದು ಹೇಳಿದೆ. ಕ್ರಿಮಿನಲ್ ದಾಖಲೆಗಳು ಮತ್ತು ಆಸ್ತಿಗಳ ವಿವರಗಳನ್ನು ಯುಪಿ ಎಲೆಕ್ಷನ್ ವಾಚ್ ಮತ್ತು ಎಡಿಆರ್ 2ನೇ ಹಂತದ ಅಭ್ಯರ್ಥಿಗಳ ಅಫಿಡವಿಟ್‌ಗಳ ಅಧ್ಯಯನದ ಆಧಾರದ ಮೇಲೆ ಬಿಡುಗಡೆ ಮಾಡಿದೆ.