ಮುಂಬೈ: ಮಹಾರಾಷ್ಟ್ರದ ನಾಶಿಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಿಂದಾಗಿ 22 ರೋಗಿಗಳು ಸಾವನ್ನಪ್ಪಿದ್ದಾರೆ. ಡಾ.ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಟ್ಯಾಂಕರ್‌ಗಳನ್ನು ತುಂಬುತ್ತಿರುವಾಗ ಆಕ್ಸಿಜನ್ ಸೋರಿಕೆಯಾಗಿರುವ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಆಸ್ಪತ್ರೆಯಲ್ಲಿನ 80 ರೋಗಿಗಳ ಪೈಕಿ 31 ರೋಗಿಗಳನ್ನ ಇದೀಗ ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳದಲ್ಲಿ ಅಗ್ನಿಶಾಮಕ ದಳ ಉಪಸ್ಥಿತವಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ. ಇದರ ಜತೆಗೆ ಅಧಿಕಾರಿಗಳು ಸ್ಥಳದಲ್ಲಿದ್ದು, ಸೋರಿಕೆಯನ್ನು ತಡೆಗಟ್ಟುವ ಕಾರ್ಯಾಚರಣೆ ನಡೆಯುತ್ತಿದೆ.
ಘಟನೆ ಬಗ್ಗೆ ಮಾತನಾಡಿರುವ ಸಚಿವ ರಾಜೇಂದ್ರ ಶಿಂಗಾನೆ, ಇದೊಂದು ದುರದೃಷ್ಟಕರ ಘಟನೆ. ಪ್ರಾಥಮಿಕ ಮಾಹಿತಿ ಪ್ರಕಾರ 22 ಜನರು ಸಾವನ್ನಪ್ಪಿದ್ದಾರೆ. ಸಂಪೂರ್ಣ ವರದಿ ನೀಡುವಂತೆ ಈಗಾಗಲೇ ಸೂಚನೆ ನೀಡಿದ್ದು, ತನಿಖೆಗೆ ಆದೇಶ ನೀಡಲಾಗಿದೆ ಎಂದಿದ್ದಾರೆ. ಇದಕ್ಕೆ ಕಾರಣರಾದವರನ್ನ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಸುಮಾರು 20 ಸಾವಿರ ಲೀಟರ್ ಆಕ್ಸಿಜನ್ ಸೋರಿಕೆಯಾಗಿದೆ ಎಂದು ತಿಳಿದು ಬಂದಿದ್ದು, ಆಸ್ಪತ್ರೆಯಲ್ಲಿ 171 ರೋಗಿಗಳು ಆಕ್ಸಿಜನ್ನಲ್ಲಿದ್ದು, 21 ರೋಗಿಗಳು ವೆಂಟಿಲೇಟರ್ನಲ್ಲಿದ್ದರು. ಆಮ್ಲಜನಕ ಸೋರಿಕೆಯಿಂದಾಗಿ 61 ರೋಗಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಬೇರೆ ಆಸ್ಪತ್ರೆಗಳಿಗೆ ರವಾನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.