ಜಮ್ಶೆಡ್‌ಪುರ (ಜಾರ್ಖಂಡ್) : ಜೈಲು ಗಲಭೆಯಲ್ಲಿ ಕೈದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಭಾಗಿಯಾಗಿದ್ದ 15 ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಇದೇ ಗಲಭೆಯಲ್ಲಿ ಭಾಗಿಯಾದ ಇತರ 10 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಜೂನ್ 25, 2019 ರಂದು ಘೀಘಡೀಹ್ ಕೇಂದ್ರ ಕಾರಾಗೃಹದಲ್ಲಿ ನಡೆದ ಪ್ರಕರಣದಲ್ಲಿ 15 ಆರೋಪಿಗಳಿಗೆ ಜೆಮ್‌ಶೆಡ್‌ಪುರ ಜಿಲ್ಲೆಯ ನ್ಯಾ. ರಾಜೇಂದ್ರ ಸಿನ್ಹಾ ಪೀಠ ಮರಣದಂಡನೆ ವಿಧಿಸಿದೆ.
ಜೆಮ್‌ಶೆಡ್‌ಪುರದ ಪರ್ಸುದಿಹ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೀಘಡೀಹ್ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಮನೋಜ್ ಸಿಂಗ್ ಅವರನ್ನು 2019 ರ ಜೂನ್ 25 ರಂದು ಹತ್ಯೆ ಮಾಡಲಾಗಿತ್ತು.
ಮನೋಜ್ ಸಿಂಗ್ ವರದಕ್ಷಿಣೆ ಕಿರುಕುಳ ಮತ್ತು ಪತ್ನಿಯ ಹತ್ಯೆಗಾಗಿ 10 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಜೂನ್ 25 ರಂದು ಜೈಲಿನೊಳಗೆ ಎರಡು ಗುಂಪುಗಳ ನಡುವೆ ಪ್ರಾಬಲ್ಯ ಸ್ಥಾಪಿಸಲು ಘರ್ಷಣೆ ನಡೆದಿದ್ದು, ತೀವ್ರ ಜಗಳ ನಡೆದು ಮನೋಜ್ ಸಿಂಗ್ ಸಾವಿಗೀಡಾಗಿದ್ದರು.