ಭುವನೇಶ್ವರ (ಒಡಿಶಾ): ಒಡಿಶಾ ರಾಜ್ಯಾದ್ಯಂತ ಮಿಂಚು ಸಹಿತ ಭಾರಿ ಮಳೆ ಸುರಿಯುತ್ತಿದೆ. ಇದರ ಪರಿಣಾಮ ಒಂದೇ ದಿನದಲ್ಲಿ ಸಿಡಿಲು ಬಡಿದು 12 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ಭಾನುವಾರ ತಿಳಿಸಿದೆ. ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ಘೋಷಿಸಿದೆ.
ರಾಜ್ಯದ ಅವಳಿ ನಗರಗಳಾದ ಭುವನೇಶ್ವರ ಮತ್ತು ಕಟಕ್ ಸೇರಿ 11 ಜಿಲ್ಲೆಗಳಲ್ಲಿ ಶನಿವಾರ ಮಿಂಚಿನೊಂದಿಗೆ ಭಾರಿ ಮಳೆಯಾಗಿದೆ. ಮಧ್ಯಾಹ್ನದ ವೇಳೆ 90 ನಿಮಿಷಗಳ ಕಾಲಾವಧಿಯಲ್ಲಿ ಭುವನೇಶ್ವರ ಮತ್ತು ಕಟಕ್‌ನಲ್ಲಿ ಕ್ರಮವಾಗಿ 126 ಮಿ.ಮೀ ಮತ್ತು 95.8 ಮಿ.ಮೀ ಮಳೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ವೇಳೆ, ಸಿಡಿಲು ಬಡಿದು ಒಟ್ಟು 12 ಜನರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಖುರ್ದಾ ಜಿಲ್ಲೆಯಲ್ಲಿ ನಾಲ್ವರು, ಬೋಲಂಗಿರ್‌ನಲ್ಲಿ ಇಬ್ಬರು ಮತ್ತು ಅಂಗುಲ್, ಬೌಧ್, ಗಜಪತಿ, ಜಗತ್‌ಸಿಂಗ್‌ಪುರ, ಧೆಂಕನಾಲ್ ಹಾಗೂ ಪುರಿಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪರಿಹಾರ ಆಯುಕ್ತರ (ಎಸ್‌ಆರ್‌ಸಿ) ಕಚೇರಿ ತಿಳಿಸಿದೆ.
ಅಲ್ಲದೇ, ಬೋಲಂಗಿರ್ ಜಿಲ್ಲೆಯಲ್ಲಿ ಎಂಟು ಮಂದಿ, ಖುರ್ದಾದಲ್ಲಿ ಮೂವರು ಮತ್ತು ಅಂಗುಲ್, ಕಟಕ್ ಮತ್ತು ಗಂಜಾಂನಲ್ಲಿ ತಲಾ ಒಬ್ಬರು ಗಾಯಗೊಂಡಿದ್ದಾರೆ. ಇದಲ್ಲದೆ, ಸಿಡಿಲು ಬಡಿದು ಗಜಪತಿಯಲ್ಲಿ ಆರು ಮತ್ತು ಕಂಧಮಾಲ್‌ನಲ್ಲಿ ಎರಡು ಸೇರಿ ಎಂಟು ಜಾನುವಾರುಗಳು ಸಾವನ್ನಪ್ಪಿವೆ ಎಂದು ಎಸ್‌ಆರ್‌ಸಿ ಕಚೇರಿ ಮಾಹಿತಿ ನೀಡಿದೆ.