2022ರ ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್ನಲ್ಲಿ ಹೊರತುಪಡಿಸಿ, ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಜಯಶಾಲಿಯಾಗಿದೆ. ಉತ್ತರ ಪ್ರದೇಶದಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಂಡರೂ ಅದೇ ವರ್ಚಸ್ಸನ್ನು ಉಳಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಸಫಲವಾದರೂ, ಅಲ್ಲಿನ 11 11 ಸಚಿವರು ಗೆಲ್ಲಲು ವಿಫಲರಾಗಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಒಟ್ಟು 402 ಸ್ಥಾನಗಳಲ್ಲಿ ಬಿಜೆಪಿ 255 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯ ಮೈತ್ರಿ ಪಕ್ಷಗಳಾದ ಅಪ್ನಾ ದಳ (ಸೋನೆಲಾಲ್) 12 ಮತ್ತು ನಿಶಾದ್ ಪಕ್ಷವು 6 ಸ್ಥಾನಗಳನ್ನು ಗಳಿಸಿದೆ. ಉಪಮುಖ್ಯಮಂತ್ರಿಯಾಗಿದ್ದ ಕೇಶವಪ್ರಸಾದ್ ಮೌರ್ಯ ಸಿರತು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಪಲ್ಲವಿ ಪಟೇಲ್ ವಿರುದ್ಧ 7,337 ಮತಗಳಿಂದ ಸೋತಿದ್ದಾರೆ. ಪಲ್ಲವಿ ಪಟೇಲ್ ಅವರು ಸಮಾಜವಾದಿ ಪಕ್ಷದ ಮಿತ್ರ ಪಕ್ಷವಾದ ಅಪ್ನಾ ದಳದವರಾಗಿದ್ದಾರೆ.
ಮತ್ತೋರ್ವ ಸಚಿವರಾಗಿದ್ದ ಸುರೇಶ್ ರಾಣಾ ಅವರು ಶಾಮ್ಲಿ ಜಿಲ್ಲೆಯ ಠಾಣಾ ಭವನ ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಲ್‌ಡಿಯ ಅಶ್ರಫ್ ಅಲಿ ಖಾನ್ ವಿರುದ್ಧ 10,000 ಮತಗಳಿಂದ ಸೋತಿದ್ದಾರೆ. ಬರೇಲಿ ಜಿಲ್ಲೆಯ ಬಹೇರಿ ಕ್ಷೇತ್ರದಲ್ಲಿ ಕಂದಾಯ ಸಚಿವ ಛತ್ರಪಾಲ್ ಸಿಂಗ್ ಗಂಗ್ವಾರ್ ಸಮಾಜವಾದಿ ಪಕ್ಷದ ಅತೌರ್ ರೆಹಮಾನ್ ವಿರುದ್ಧ 3,355 ಮತಗಳಿಂದ ಮಣಿಸಲ್ಪಟ್ಟಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅಲಿಯಾಸ್ ಮೋತಿ ಸಿಂಗ್ಅವರು ಪ್ರತಾಪ್‌ಗಢದ ಪಟ್ಟಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ರಾಮ್ ಸಿಂಗ್ ವಿರುದ್ಧ 22,051 ಮತಗಳಿಂದ ಸೋತಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಚಿವ ಚಂದ್ರಿಕಾ ಪ್ರಸಾದ್ ಉಪಾಧ್ಯಾಯ ಅವರು ಚಿತ್ರಕೂಟ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಸಮಾಜವಾದಿ ಪಕ್ಷದ ಅನಿಲ್ ಕುಮಾರ್ ವಿರುದ್ಧ 20,876 ಮತಗಳಿಂದ ಸೋತಿದ್ದಾರೆ.