ಟೋಕಿಯೊ/ಜಪಾನ್ :ಭಾನುವಾರ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ನ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳ ಸಂಖ್ಯೆಗೆ ಯಾವುದೇ ಮಿತಿ ವಿಧಿಸದೇ, ಅಧಿಕಾರಿಗಳ ಸಂಖ್ಯೆಗೆ ಮಿತಿಗೊಳಿಸಲಾಗಿದ್ದು, ಕೇವಲ 10 ಅಧಿಕಾರಿಗಳು ಪಾಲ್ಗೊಳ್ಳಬಹುದಾಗಿದೆ.
ಒಲಿಂಪಿಕ್ಸ್ನ ಸಮಾರೋಪ ಸಮಾರಂಭದಲ್ಲಿ ತಮ್ಮ ದೇಶದ ಉಡುಪು ಬದಲಿಗೆ ಟ್ರ್ಯಾಕ್ ಸೂಟ್ಗಳಲ್ಲಿ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಹಾಕಿ ಮತ್ತು ಕುಸ್ತಿ ತಂಡವು ಸಂಜೆ 4.30ಕ್ಕೆ ನಡೆಯುವ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ ಪ್ರೋಟೋಕಾಲ್ನಂತೆ, ಈ ಒಲಿಂಪಿಕ್ಸ್ನ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿದಂತೆ ಪದಕ ವಿಜೇತರನ್ನು ಮುಂದಿನ ವರ್ಷ ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಸೇರಿ ಹಲವು ಕ್ರೀಡಾಕೂಟಗಳಲ್ಲಿ ಧ್ವಜಧಾರಿಗಳನ್ನಾಗಿ ಮಾಡಲಾಗುವುದು.
ಪುರುಷರ ಹಾಕಿ ನಾಯಕ ಮನ್ಪ್ರೀತ್ ಸಿಂಗ್ ಮತ್ತು ಬಾಕ್ಸರ್ ಎಂ ಸಿ ಮೇರಿ ಕೋಮ್ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿದ್ದರು. ಉದ್ಘಾಟನಾ ಸಮಾರಂಭದಲ್ಲಿಯೂ ಅಧಿಕಾರಿಗಳ ಸಂಖ್ಯೆ ಮಿತಿಗೊಳಿಸಿ, ಒಲಿಂಪಿಕ್ಸ್ ಕಮಿಟಿ ಆದೇಶ ಹೊರಡಿಸಿತ್ತು. ಟೋಕಿಯೊದಲ್ಲಿ ಒಂದು ಚಿನ್ನವೂ ಸೇರಿ ಏಳು ಪದಕಗಳನ್ನು ಭಾರತ ಪಡೆದಿದ್ದು, ಉತ್ತಮ ಪ್ರದರ್ಶನ ತೋರಿದೆ.