ಬೆಂಗಳೂರು: ರಾಜ್ಯ ವಿಧಾನಸಭೆ ಕ್ಷೇತ್ರಗಳ ಪೈಕಿ ಅತಿಹೆಚ್ಚು ವಾಣಿಜ್ಯ ಚಟುವಟಿಕೆಗಳಿಂದ ಕೂಡಿರುವ ಹಾಗೂ ಕೊಳೆಗೇರಿಗಳ ಸ್ವರ್ಗ ಎಂದೇ ಪ್ರಸಿದ್ಧಿಯಾಗಿರುವ ಕ್ಷೇತ್ರ ಗಾಂಧಿನಗರ. ಇಲ್ಲೀಗ ಚುನಾವಣೆ ಕಾವು ದಟ್ಟವಾಗುತ್ತಿದ್ದು, ಸತತ ನಾಲ್ಕನೇ ಗೆಲುವಿನತ್ತ ನಾಗಾಲೋಟದಲ್ಲಿರುವ ಕಾಂಗ್ರೆಸ್ನ ದಿನೇಶ್ ಗುಂಡೂರಾವ್ ಅವರಿಗೆ ಕಮಲ ಪಕ್ಷ ದೊಡ್ಡ ತೊಡಕಾಗಿದೆ.
1999ರಿಂದ ಇದುವರೆಗೂ ನಡೆದಿರುವ ಐದು ಚುನಾವಣೆಗಳ ಪೈಕಿ ನಾಲ್ಕರಲ್ಲಿ ಸ್ಪರ್ಧಿಸಿ ನಾಲ್ಕನ್ನೂ ಗೆದ್ದಿರುವ ದಿನೇಶ್ ಗುಂಡೂರಾವ್, 2004ರಲ್ಲಿ ಟಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು. ಆ ವರ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ಸೋತಿತ್ತು. ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಗಾಂಧಿನಗರ ನಿಧಾನವಾಗಿ ಬಿಜೆಪಿಯತ್ತ ಒಲಿಯುತ್ತಿರುವಂತೆ ಭಾಸವಾಗುತ್ತಿದೆ. ಆದರೆ, ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತಿರುವ ಬಿಜೆಪಿ ಈ ಸಾರಿ ಒಬ್ಬ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಜನಪ್ರಿಯತೆ ಉತ್ತಮವಾಗಿದ್ದು, ಕೊಳೆಗೇರಿ ಮತದಾರರ ಸಂಪೂರ್ಣ ಬೆಂಬಲ ಹೊಂದಿದ್ದಾರೆ. ಈ ಸಾರಿಯೂ ಕೊಳೆಗೇರಿ ಮತದಾರರು ದಿನೇಶ್ ಕೈ ಹಿಡಿದರೆ ಗೆಲುವು ಸುಲಭ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.
ಕ್ಷೇತ್ರದ ಹಿನ್ನೋಟ: 1957ರಿಂದ ನಡೆದಿರುವ ಚುನಾವಣೆಯಲ್ಲಿ ಗಾಂಧಿನಗರ ವಿಧಾನಸಭೆ ಕ್ಷೇತ್ರದ ಮತದಾರರು ಕೈ ಹಿಡಿದದ್ದೇ ಹೆಚ್ಚು. 1957ರಲ್ಲಿ ನಾಗರತ್ನಮ್ಮ ಪಕ್ಷೇತರ ಅಭ್ಯರ್ಥಿ ಜೆ. ಲಿಂಗಯ್ಯ ವಿರುದ್ಧ 8,098 ಮತಗಳ ಅಂತರದ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ಗೆ ಶುಭಾರಂಭ ನೀಡಿದ್ದರು. 1962ರಲ್ಲಿಯೂ ನಾಗರತ್ನಮ್ಮ ಅವರೇ ಗೆದ್ದಿದ್ದರು. ಪಕ್ಷೇತರ ಅಭ್ಯರ್ಥಿ ಎಚ್.ಎಲ್ ನಂಜಪ್ಪ ವಿರುದ್ಧ ಅವರಿಗೆ 5917 ಮತಗಳ ಅಂತರದ ಗೆಲುವು ಲಭಿಸಿತ್ತು. 1967ರಲ್ಲಿ ಪಕ್ಷೇತರ ಅಭ್ಯರ್ಥಿ ಬಲ್ಸು ಪುರ್ಸುಕದಂ ಕಾಂಗ್ರೆಸ್ನ ಗಾಂವಕರ್ ಸಖರಾಮ್ ದತ್ತಾತ್ರೇಯ ವಿರುದ್ಧ 9,320 ಮತಗಳ ಅಂತರದಿಂದ ಗೆದ್ದಿದ್ದರು. ಈ ಮೂಲಕ ಮೊದಲ ಬಾರಿಗೆ ಕ್ಷೇತ್ರ ಕಾಂಗ್ರೆಸ್ ಕೈತಪ್ಪಿತ್ತು.
ಆದರೆ 1972ರಲ್ಲಿ ಬಲ್ಸು ಪುರ್ಸುಕದಂ ಕಾಂಗ್ರೆಸ್ ಸೇರಿ ಪಕ್ಷದ ಟಿಕೆಟ್ ಪಡೆದು ಸ್ಪರ್ಧಿಸಿದ್ದರು. ಆಗ ಬಿಜೆಎಸ್ನ ಅಭ್ಯರ್ಥಿಯಾಗಿದ್ದ ಕೃಷ್ಣಾಪುರ ಚಾರು ದೇಮು ವಿರುದ್ಧ 11,111 ಮತಗಳ ಅಂತರದಿಂದ ಗೆದ್ದರು. 1978ರಲ್ಲಿ ಐಎನ್ಸಿ (ಐ) ಅಭ್ಯರ್ಥಿ ಕೆ.ಲಕ್ಷ್ಮಣ್ ಜೆಎನ್ಪಿಯ ಎಂ.ಆರ್. ಜಯರಾಂ ವಿರುದ್ಧ 3,918 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. 1983ರಲ್ಲಿ ಜೆಎನ್ಪಿ ಅಭ್ಯರ್ಥಿ ಎಂ.ಎಸ್. ನಾರಾಯಣ ರಾವ್ ಕಾಂಗ್ರೆಸ್ನ ಬಿ.ಕೆ. ಹರಿಪ್ರಸಾದ್ ವಿರುದ್ಧ 9399 ಮತಗಳ ಅಂತರದಿಂದ ಗೆದ್ದಿದ್ದರು.
1985ರಲ್ಲಿ ಬಿ.ಸ್ವಾಮಿರಾವ್ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿದ್ದರು. ಜೆಎನ್ಪಿಯ ಜಿ. ನಂಜುಂಡಪ್ಪ ವಿರುದ್ಧ 2,461 ಮತಗಳ ಅಂತರದಿಂದ ಜಯ ಸಾಧಿಸಿದ್ದರು. 1989ರಲ್ಲಿ ಕಾಂಗ್ರೆಸ್ನಿಂದ ಕಣಕ್ಕಿಳಿದ ಆರ್. ದಯಾನಂದರಾವ್ ಜನತಾ ಪರಿವಾರದ ಅಭ್ಯರ್ಥಿ ಲೀಲಾದೇವಿ ಆರ್. ಪ್ರಸಾದ್ ವಿರುದ್ಧ 13,352 ಮತಗಳ ಅಂತರದಿಂದ ಗೆಲುವು ಕಂಡಿದ್ದರು. 1994ರಲ್ಲಿ ಬಿಜೆಪಿಯ ಆಯನೂರು ಮಂಜುನಾಥ್ ಜನತಾಪರಿವಾರದ ಅಭ್ಯರ್ಥಿ ಜಿ. ನಂಜುಂಡಪ್ಪ ವಿರುದ್ಧ 627 ಮತಗಳ ಅಂತರದ ಗೆಲುವು ಸಾಧಿಸಿದ್ದರು.
ದಿನೇಶ್ ಪ್ರವೇಶ: 1999ರಲ್ಲಿ ಕಾಂಗ್ರೆಸ್ ಪಕ್ಷದಿಂದ ದಿನೇಶ್ ಗುಂಡೂರಾವ್ ಪ್ರವೇಶವಾಯಿತು. ಮಾಜಿ ಸಿಎಂ ಆರ್.ಗುಂಡೂರಾವ್ ಪುತ್ರ ಎನ್ನುವ ಖ್ಯಾತಿಯ ಜತೆಗೆ ಒಂದಿಷ್ಟು ರಾಜಕೀಯ ಅನುಭವವನ್ನೂ ಪಡೆದಿದ್ದ ದಿನೇಶ್ ಆ ವರ್ಷ ಜೆಡಿಯುನಿಂದ ಸ್ಪರ್ಧಿಸಿದ್ದ ಜಿ. ನಂಜುಂಡಪ್ಪ ವಿರುದ್ಧ 11,331 ಮತಗಳ ಅಂತರದಿಂದ ಜಯ ದಾಖಲಿಸಿದ್ದರು. ಆದರೆ, 2004ರಲ್ಲಿ ಕಾಂಗ್ರೆಸ್ ಡಾ. ನಾರಾಯಣಪ್ಪ ಜಿಡಿ ಅವರಿಗೆ ಟಿಕೆಟ್ ನೀಡಿತ್ತು. ಇವರು ಬಿಜೆಪಿಯ ಹಾಲಪ್ಪ ಎಚ್ ವಿರುದ್ಧ 16,850 ಮತಗಳ ಅಂತರದ ಸೋಲನ್ನು ಕಂಡಿದ್ದರು. ಇದಾದ ಬಳಿಕ 2008ರಲ್ಲಿ ಕಾಂಗ್ರೆಸ್ ದಿನೇಶ್ ಗುಂಡೂರಾವ್ ಅವರನ್ನೇ ಕಣಕ್ಕಿಳಿಸಿತ್ತು. ಪಿ.ಸಿ. ಮೋಹನ್ ವಿರುದ್ಧ 2008ರಲ್ಲಿ 2,946 ಮತಗಳ ಹಾಗೂ 2013ರಲ್ಲಿ 22,607 ಮತಗಳ ಅಂತರದಿಂದ ಗುಂಡೂರಾವ್ ಗೆಲುವು ಸಾಧಿಸಿದ್ದರು. 2018ರಲ್ಲಿ ಅಭ್ಯರ್ಥಿ ಬದಲಿಸಿದ ಬಿಜೆಪಿ ಮಾಜಿ ಸಚಿವ ರಾಮಚಂದ್ರಗೌಡರ ಪುತ್ರ ಸಪ್ತಗಿರಿ ಗೌಡರಿಗೆ ಟಿಕೆಟ್ ನೀಡಿತ್ತು. ದಿನೇಶ್ ಗುಂಡೂರಾವ್ ಈ ಯುವ ನಾಯಕನ ವಿರುದ್ಧ 10,070 ಮತಗಳ ಅಂತರದಿಂದ ಸುಲಭವಾಗಿ ಗೆಲುವು ಸಾಧಿಸಿದ್ದರು.