ಬೆಂಗಳೂರು: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಇಡೀ ಪ್ರಚಾರ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.ಹೈಕಮಾಂಡ್ ನ ಜೋಡೆತ್ತುಗಳಾದ ಪ್ರಧಾನಿ ನರೇಂದ್ರ ಮೋದಿ ಹಾಗು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಅಬ್ಬರದ ಪ್ರಚಾರ ಕಾರ್ಯ ನಡೆಸಿದರು. ಆದರೂ ಮೋದಿ ಹಾಗು ಅಮಿತ್ ಶಾ ಅವರ ರೋಡ್ ಶೋಗಳು, ಚುನಾವಣಾ ರ್ಯಾಲಿಗಳು ಮಾತ್ರ ಬಿಜೆಪಿ ಕೈ ಹಿಡಿಯಲಿಲ್ಲ. ರ್ಯಾಲಿಗೆ ಜನ ಬಂದರೂ ಪಕ್ಷ ಅಧಿಕಾರಕ್ಕೆ ಬರಲಿಲ್ಲ.
ಈವರೆಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಹೈಕಮಾಂಡ್ ನೇತೃತ್ವದಲ್ಲಿ ಚುನಾವಣೆ ಎದುರಿಸಿತು. ಹೈಕಮಾಂಡ್ ನಾಯಕರೇ ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸಿದರು. ಬೃಹತ್ ಸಾರ್ವಜನಿಕ ಸಮಾವೇಶಗಳು,ರೋಡ್ ಶೋಗಳನ್ನು ನಡೆಸಿದರು. ಎಲ್ಲಾ ವಲಯಗಳನ್ನೇ ಕೇಂದ್ರೀಕರಿಸಿಕೊಂಡು ಪ್ರಚಾರ ಕಾರ್ಯ ನಡೆಸಿದರು.
ಭರ್ಜರಿ ಪ್ರಚಾರ ನಡೆಸಿದ ನಾಯಕರು: ಕಳೆದ ಎರಡೂವರೆ ತಿಂಗಳಿನಲ್ಲಿ 17ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 10ಕ್ಕೂ ಹೆಚ್ಚು ಬಾರಿ ಬಂದಿದ್ದಾರೆ.31 ನಾಯಕರು ಹೊರ ರಾಜ್ಯದಿಂದ ಪ್ರಚಾರ ಕಾರ್ಯಕ್ಕೆ ಬಂದಿದ್ದರು. ನರೇಂದ್ರ ಮೋದಿ ರಾಜ್ಯದಲ್ಲಿ 19 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 6 ರೋಡ್ ಶೋ ನಡೆಸಿದ್ದರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 10 ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು, 16 ರೋಡ್ ಶೋ ನಡೆಸಿದ್ದರು, ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ 16ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು,17 ರೋಡ್ ಶೋ ನಡೆಸಿದ್ದಾರೆ.
ಇದರ ಜೊತೆ 16 ಜನರ ರಾಜ್ಯ ನಾಯಕರ ತಂಡ 231 ಸಭೆಯನ್ನು ರಾಜ್ಯದಲ್ಲಿ ಮಾಡಿದ್ದಾರೆ, 48 ರೋಡ್ ಶೋ ಅನ್ನು ರಾಜ್ಯ ನಾಯಕರ ತಂಡ ಮಾಡಿದೆ, ಅಕ್ಕಪಕ್ಕದ ರಾಜ್ಯಗಳಿಂದ ನಾಯಕರು ಬಂದಿದ್ದರು, ಆಯಾ ಭಾಷಿಕರು ಹೆಚ್ಚಿರುವ ಕಡೆ ಆಯಾ ರಾಜ್ಯಗಳ ನಾಯಕರ ಪ್ರಚಾರ ಮಾಡಿಸಲಾಗಿತ್ತು ಹೊರರಾಜ್ಯದವರಿಂದ 206 ಸಭೆ ಮಾಡಿಸಲಾಗಿತ್ತು, ದೇಶದ ಬೇರೆ ಬೇರೆ ಕಡೆ ಚುನಾವಣೆ ನಡೆದಾಗ ರಾಜ್ಯದಿಂದ ನಾಯಕರು ಹೋಗುವ ರೀತಿ ಬೇರೆ ಕಡೆಯಿಂದಲೂ ಇಲ್ಲಿಗೆ ಪ್ರಚಾರಕ್ಕೆ ನಾಯಕರನ್ನು ಕರೆತರಲಾಗಿತ್ತು, 55112 ಬೂತ್ ಗಳಲ್ಲಿ ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದರ ಜೊತೆ ಎರಡು ದಿನ ಬೂತ್ ಮಹಾ ಅಭಿಯಾನ ನಡೆಸಲಾಗಿತ್ತು, 311 ದೇವಸ್ಥಾನಕ್ಕೆ ಭೇಟಿಯಾಗಿತ್ತು, 9125 ಚಿಕ್ಕಪುಟ್ಟ ಸಭೆ ನಡೆಸಲಾಗಿತ್ತು.1137 ಚಿಕ್ಕ ರೋಡ್ ಶೋ ಮಾಡಲಾಗಿತ್ತು. 20 ಲಕ್ಷ ಜನರನ್ನು ಕೇವಲ ಮಹಾ ಅಭಿಯಾನದ ಒಂದೂವರೆ ದಿನದಂದು ತಲುಪಲಾಗಿತ್ತು.