ಬೆಂಗಳೂರು:ರಾಜ್ಯ ಚುನಾವಣಾ ರಣಕಣದ ಫಲಿತಾಂಶ ಹೊರಬಿದ್ದಿದೆ. ರಾಜ್ಯದಲ್ಲಿ ಬಹುಮತದ ಕಮಲ ಅರಳಿಸುವ ಬಿಜೆಪಿ ಕನಸು ಭಗ್ನವಾಗಿದೆ. ಮತಪ್ರಭುಗಳು ಬಿಜೆಪಿಯ ಗದ್ದುಗೆ ನಿರೀಕ್ಷೆಗೆ ತಣ್ಣೀರು ಎರಚಿದ್ದಾರೆ. ಚುನಾವಣಾ ಆಖಾಡದಲ್ಲಿ ಬಿಜೆಪಿಯ ಹಿಂದುತ್ವ ಅಸ್ತ್ರ ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ.
ಬಿಜೆಪಿ ಫಲಿತಾಂಶವೂ ಮತದಾರರು ಬಿಜೆಪಿಯ ಪಟ್ಟದ ಕನಸಿಗೆ ತಣ್ಣೀರು ಎರಚಿದ್ದಾರೆ. ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ಎಂಬ ಪ್ರಧಾನಿ ಮೋದಿ ಕರೆಗೆ ರಾಜ್ಯದ ಮತಪ್ರಭುಗಳು ಹೆಚ್ಚಿನ ಮಣೆ ಹಾಕಿಲ್ಲ. ಆಡಳಿತ ವಿರೋಧಿ ಅಲೆಗೆ ಬಿಜೆಪಿ ಮುಗ್ಗರಿಸಿದೆ. ಡಬಲ್ ಇಂಜಿನ್ ಸರ್ಕಾರದೊಂದಿಗೆ ಚುನಾವಣಾ ಪ್ರಚಾರ ನಡೆಸಿದ ಬಿಜೆಪಿಗೆ ಜನರು ಜೈ ಎಂದಿಲ್ಲ.
ಮೋದಿಯ ಅಬ್ಬರದ ಪ್ರಚಾರ, ಅಮಿತ್ ಶಾರ ಚಾಣಕ್ಯತೆಗೆ ರಾಜ್ಯದ ಜನರು ಮಣೆಹಾಕಿಲ್ಲ. ಬಿಜೆಪಿಗೆ ಭ್ರಷ್ಟಾಚಾರ, ಕಮಿಷನ್ ಆರೋಪ ಮುಳುವಾಗಿ ಪರಿಣಮಿಸಿತು. ಹೀಗಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರದ ಕನಸು ಭಗ್ನವಾಗಿದೆ. ಈ ಬಾರಿ ಚುನಾವಣಾ ಅಖಾಡದಲ್ಲಿ ಬಿಜೆಪಿ ನಾನಾ ಅಸ್ತ್ರಗಳೊಂದಿಗೆ ಕಣಕ್ಕಿಳಿದಿತ್ತು. ಇದರಲ್ಲಿ ಪ್ರಮುಖವಾದ ಅಸ್ತ್ರ ಹಿಂದುತ್ವದ ಅಜೆಂಡಾ. ಆದರೆ ಆಡಳಿತ ವಿರೋಧಿ ಅಲೆಗೆ ಬಿಜೆಪಿಯ ಪ್ರಬಲ ಹಿಂದುತ್ವ ಅಸ್ತ್ರವೂ ಗುರಿ ಮುಟ್ಟಲು ವಿಫಲವಾಗಿದೆ.
ಹಿಂದುತ್ವದ ಅಸ್ತ್ರದೊಂದಿಗೆ ಭರ್ಜರಿ ಪ್ರಚಾರ:ಬಿಜೆಪಿ ಈ ಬಾರಿ ರಣಕಣದಲ್ಲಿ ಹಿಂದುತ್ವ ಅಸ್ತ್ರವನ್ನು ಪ್ರಬಲವಾಗಿನೇ ಬಳಸಿತ್ತು. ಮೋದಿಯ ಅಲೆಯೊಂದಿಗೆ ಹಿಂದುತ್ವದ ಅಲೆ ಮೂಡಿಸಿ ಅಧಿಕಾರದ ಗದ್ದುಗೆ ಹಿಡಿಯುವ ಬಿಜೆಪಿಯ ಕನಸಿಗೆ ಮತದಾರರು ಮಣೆ ಹಾಕಿಲ್ಲ. ಬಿಜೆಪಿ ನಾಯಕರು ಈ ಬಾರಿ ಅಖಾಡದಲ್ಲಿ ಹಿಂದುತ್ವದ ಕಾರ್ಡ್ ನ್ನು ಹರಿ ಬಿಟ್ಟಿದ್ದರು.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧದ ಅಂಶವನ್ನೇ ದಾಳವಾಗಿಸಿದ ಬಿಜೆಪಿ ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಅಸ್ತ್ರವನ್ನು ರಾಜ್ಯಾದ್ಯಂತ ಭರ್ಜರಿಯಾಗಿ ಬಳಸಿತ್ತು. ಬಜರಂಗ ದಳ ನಿಷೇಧಿಸುವ ಮೂಲಕ ಕಾಂಗ್ರೆಸ್ ಬಜರಂಗಿಯ ವಿರೋಧಿಗಳಲಾಗಿದ್ದಾರೆ ಎಂದು ಸ್ವತಃ ಪ್ರಧಾನಿ ಮೋದಿ ಪ್ರಚಾರ ಭಾಷಣದ ವೇಳೆ ಹೇಳುವ ಮೂಲಕ ಹಿಂದುತ್ವದ ಕಾರ್ಡ್ ಬಳಸಿದ್ದರು. ಇಲ್ಲಿವರೆಗೆ ಕಾಂಗ್ರೆಸ್ ಅವರು ರಾಮನ ವಿರೋಧಿಗಳಾಗಿದ್ದರು ಈಗ ರಾಮನ ಬಂಟ ಬಜರಂಗಿಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಹಿಂದೂಗಳ ಮತಸೆಳೆಯಲು ಯತ್ನಿಸಿದರು.