ಬೆಂಗಳೂರು: ಯುಜಿಸಿಇಟಿ-ನೀಟ್ ಕೋರ್ಸ್ಗಳಿಗೆ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಸುಮಾರು 15 ಸಾವಿರ ಅಭ್ಯರ್ಥಿಗಳು ಯಾವ ಆಯ್ಕೆಗಳನ್ನೂ ದಾಖಲಿಸಿಲ್ಲ. ಹೀಗಾಗಿ, ಅವರಿಗೆ ಅನುಕೂಲವಾಗಲೆಂದು ಗಡುವನ್ನು ಇಂದು ಮಧ್ಯಾಹ್ನ 12 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಆಯ್ಕೆ ದಾಖಲಾತಿಗೆ ಸೆ.3ರ ರಾತ್ರಿ 12ಗಂಟೆವರೆಗೂ ಅವಕಾಶವಿತ್ತು. ಅದನ್ನು ಇದೀಗ ವಿಸ್ತರಿಸಲಾಗಿದೆ. ಹಾಗೆಯೇ ಶುಲ್ಕ ಪಾವತಿಗೆ ಇಂದು ಸಂಜೆ 4 ಗಂಟೆಯವರೆಗೆ ಅವಕಾಶವಿರಲಿದೆ. ಅಭ್ಯರ್ಥಿಗಳು ಕೊನೆ ಕ್ಷಣದವರೆಗೂ ಕಾಯದೆ ಆಯ್ಕೆ ದಾಖಲಿಸಿ, ನಂತರದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಶುಲ್ಕ ಪಾವತಿಯ ನಂತರ ಆದೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಈವರೆಗೆ 92 ಸಾವಿರ ಮಂದಿ ತಮ್ಮ ಆಯ್ಕೆ ದಾಖಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.