ದಾವಣಗೆರೆ : ಜಿಲ್ಲೆಯಲ್ಲಿ ಭತ್ತ ನಾಟಿ ಮಾಡಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಅಧಿಕ ಕೂಲಿ ಕೊಡ್ತೀವಿ ಬನ್ನಿ ಎಂದು ಕರೆದರೂ ಕೂಡ ಮಾಲೀಕರ ಮಾತಿಗೆ ಕಿಮ್ಮತ್ ಇಲ್ಲದಂತೆ ಆಗಿದೆ. ಇಷ್ಟೊತ್ತಿಗೆ ಇಡೀ ಜಿಲ್ಲೆಯಲ್ಲಿ ಭತ್ತ ನಾಟಿ ಕಾರ್ಯ ಮುಗಿಯಬೇಕಾಗಿತ್ತು. ದುರಂತ ಎಂದರೆ ಕಾರ್ಮಿಕರ ಕೊರತೆ ಹಿನ್ನೆಲೆ ಬಿತ್ತನೆ ಕಾರ್ಯ ಮಾತ್ರ ಮುಗಿದಿಲ್ಲ. ಇದರಿಂದ ಜಿಲ್ಲೆಯ ರೈತರು ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರಿ ಕಾರ್ಮಿಕರ ಮೊರೆ ಹೋಗಿದ್ದಾರೆ. ಭರ್ಜರಿಯಾಗಿ ಕೆಲಸ ಮಾಡುವ ಬಿಹಾರಿ ಕಾರ್ಮಿಕರು, ನೀಟ್ ಆಗಿ ಕೆಲಸ ಮಾಡ್ತಿದ್ದರಿಂದ ರೈತರು ಅವರ ಕೆಲಸದಿಂದ ಫಿದಾ ಆಗಿದ್ದಾರೆ.
ಸದ್ಯ ದಾವಣಗೆರೆ ಜಿಲ್ಲೆಯಲ್ಲಿ ಭತ್ತ ನಾಟಿ ಮಾಡುವ ಸುಗ್ಗಿ ಜೋರಾಗಿದೆ. ಆಗಸ್ಟ್ ಅಂತ್ಯಕ್ಕೆ ಭತ್ತ ನಾಟಿ ಮಾಡುವುದು ಸಂಪೂರ್ಣವಾಗಿ ಮುಗಿಯಬೇಕಿತ್ತು. ಆದರೆ, ಸೆಪ್ಟೆಂಬರ್ ತಿಂಗಳು ಆರಂಭ ಆಗಿದ್ದರೂ ಕೂಡ ಭತ್ತ ನಾಟಿ ಕಾರ್ಯ ಮಾತ್ರ ಮಂದಗತಿಯಲ್ಲಿ ಸಾಗಿದ್ದು, ಶೇ. 80 ರಷ್ಟು ದಾಟಿಲ್ಲ. ಜಮೀನುಗಳಲ್ಲಿ ನಾಟಿ ಮಾಡಲು ಸರಿಯಾದ ಸಮಯಕ್ಕೆ ರೈತರಿಗೆ ಕೂಲಿ ಕಾರ್ಮಿಕರು ಸಿಗದೇ ಇರುವುದೇ ದೊಡ್ಡ ತಲೆಬಿಸಿಯಾಗಿದೆ.

ಸ್ಥಳೀಯ ಕಾರ್ಮಿಕರಿಗೆ ಡಿಮ್ಯಾಂಡ್ ಹೆಚ್ಚಾದ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ರೈತರು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸೋಂ, ಮಧ್ಯಪ್ರದೇಶ ರಾಜ್ಯದ ಕಾರ್ಮಿಕರ ಮೊರೆ ಹೋಗಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 200 ಕಾರ್ಮಿಕರು ನಾಲ್ಕು ಗುಂಪಿನಂತೆ ಭತ್ತದ ನಾಟಿ ಮಾಡಲು ಬಂದು ಇಲ್ಲೇ ಬೀಡುಬಿಟ್ಟಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಿಟ್ಟೂರು, ಮಲ್ಲನಾಯಕನಹಳ್ಳಿ, ಮಲೇಬೆನ್ನೂರು ಭಾಗದಲ್ಲಿ ಗ್ರಾಮದಲ್ಲಿ ನಾಟಿ ಆರಂಭಿಸಿದ್ದಾರೆ. ಒಂದು ದಿನಕ್ಕೆ ಈ ಉತ್ತರ ಭಾರತದ ಕಾರ್ಮಿಕರು ಕನಿಷ್ಠ ಎಂದರೂ 08-10 ಎಕರೆ ನಾಟಿ ಮಾಡುತ್ತಾರೆ. ಇವರ ನೀಟ್ ಹಾಗೂ ಸ್ವಚ್ಛ ಕೆಲಸಕ್ಕೆ ದಾವಣಗೆರೆ ರೈತರು ಫಿದಾ ಆಗಿದ್ದಾರೆ. ಏಜೆಂಟರುಗಳ ಮೂಲಕ ದೂರದ ಊರುಗಳಿಂದ ಆಗಮಿಸುವ ಈ ಉತ್ತರ ಭಾರತದ ಕಾರ್ಮಿಕರ ಕೆಲಸ ನೀಟಾಗಿರುತ್ತದೆ. ಅಲ್ಲದೇ ಗೆರೆ ಒಡೆದು ನಾಟಿ ಮಾಡುವುದೇ ಇವರ ಕೆಲಸದ ವಿಶೇಷ ಆಗಿದೆ.
ಯುಪಿಯ ಕಾರ್ಮಿಕ ನಿತೀಶ್ ಕುಮಾರ್ ಪ್ರತಿಕ್ರಿಯಿಸಿ, 'ನಾವು ಯುಪಿಯಿಂದ ಆಗಮಿಸಿದ್ದೇನೆ, ನಮ್ಮ ಬ್ಯಾಚ್ನಲ್ಲಿ 14 ಜನರಿದ್ದೇವೆ. ಒಂದು ದಿನಗಳಲ್ಲಿ 6-7 ಎಕರೆ ನಾಟಿ ಮಾಡುತ್ತೇವೆ. ಬೆಳಗ್ಗೆ 6 ರಿಂದ ಸಂಜೆ 6 ತನಕ ಕೆಲಸ ಮಾಡುತ್ತೇವೆ. ಏಜೆಂಟ್ ನಮ್ಮನ್ನು ಕರೆ ತಂದಿದ್ದಾರೆ. ಗ್ಯಾಸ್ ರೂಮ್, ಊಟ ಎಲ್ಲ ಕೊಡ್ತಾರೆ. ಏಜೆಂಟ್ ನಮಗೆ ಹಣವನ್ನು ಶೇಖರಿಸಿ ಕೊಡ್ತಾನೆ. ನಾವು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶದಿಂದ ಬಂದಿದ್ದೇವೆ. ಒಂದು ದಿನಕ್ಕೆ ಒಂದು ಸಾವಿರ ಪಗಾರ ನಮಗೆ ಸಿಕ್ಕೆ ಸಿಗುತ್ತದೆ, ತೆಲಂಗಾಣದಲ್ಲೂ ಕೆಲಸ ಮಾಡಿದ್ದೇವೆ' ಎಂದರು.
ದೂರದ ಊರುಗಳಿಂದ ದಾವಣಗೆರೆಗೆ ಬಂದಿದ್ದಾದರೂ ಹೇಗೆ? : ರಾಜ್ಯದಲ್ಲಿ ಸದ್ಯ ಭತ್ತ ನಾಟಿ ಮಾಡಲು ಕೂಲಿ ಕಾರ್ಮಿಕರನ್ನು ರೈತರು ಹುಡುಕುವುದೇ ದೊಡ್ಡ ಕೆಲಸ ಆಗಿದೆ. ಇದರಿಂದ ರೈತರು ಏಜೆಂಟ್ಗಳ ಮುಖೇನ ಉತ್ತರ ಭಾಗದ ಕಾರ್ಮಿಕರ ಮೊರೆ ಹೋಗಿದ್ದಾರೆ. ಸ್ಥಳೀಯ ಕಾರ್ಮಿಕರ ಕೊರತೆ ಎದುರಾದ ಬೆನ್ನಲ್ಲೇ ದೂರದ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಅಸ್ಸೋಂನಿಂದ ಕಾರ್ಮಿಕರು ಏಜೆಂಟ್ ಮೂಲಕ ಕರೆ ತರಲಾಗುತ್ತದೆ. ಈ ಕಾರ್ಮಿಕರು ಹೆಚ್ಚಾಗಿ ಪಕ್ಕದ ತೆಲುಗು ರಾಜ್ಯಗಳಲ್ಲೇ ಈ ನಾಟಿ ಕೆಲಸ ಮಾಡ್ತಿದ್ದರು. ಇದೀಗ ಕರ್ನಾಟಕದ ದಾವಣಗೆರೆಗೆ ಲಗ್ಗೆ ಇಟ್ಟಿದ್ದಾರೆ.
ಕಾರ್ಮಿಕರನ್ನ ಅರಸಿ 2000 ಕಿ. ಮೀ ದೂರದಿಂದ ಕರೆತರಲಾಗಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ ಕಾರ್ಮಿಕರ ಕೂಲಿ ಕಡಿಮೆ. ಆದರೂ ಅವರ ಕೆಲಸ ಭಾರಿ ನೀಟ್. ಭತ್ತದ ಸಸಿ ಸಾಲುಗಳು ಗೆರೆ ಹೊಡೆದಂತಿರುತ್ತವೆ. ಇದರ ಲಾಭ ಪಡೆಯುವ ಏಜೆಂಟರು ರೈತರಿಂದ ಹೆಚ್ಚು ಹಣ ಪಡೆಯುತ್ತಾರೆ. ಸ್ಥಳೀಯ ಕಾರ್ಮಿಕರು ಒಂದು ಎಕರೆ ಭತ್ತ ನಾಟಿಗೆ 3,500 ರೂ. ಪಡೆದರೆ, ಉತ್ತರ ಭಾರತದ ಕಾರ್ಮಿಕರಿಗೆ 4000 - 4500 ರೂಪಾಯಿ ಕೂಲಿ ಇದೆ. ಏಜೆಂಟ್ ಮೂಲಕ ಒಬ್ಬ ಕಾರ್ಮಿಕನಿಗೆ ಒಂದು ದಿನಕ್ಕೆ ಒಂದು ಸಾವಿರ ಸಿಗುತ್ತದೆ ಎಂದು ಯುಪಿಯ ನಿತೀಶ್ ತಿಳಿಸಿದರು.
ಇವರ ಕೆಲಸ ನೀಟ್ : ಮೊದಲೇ ಹೇಳಿದಂತೆ ಬಿಹಾರಿ ಕಾರ್ಮಿಕರ ನಾಟಿ, ಪಟ್ಟಿ ಇರಿಸಿ ಗೆರೆ ಹೊಡೆದಷ್ಟು ನೀಟಾಗಿರುತ್ತದೆ. ಸ್ಥಳೀಯ ಕಾರ್ಮಿಕರು ಸಸಿಗಳ ಬೇರುಗಳಲ್ಲಿನ ಮಣ್ಣಿನ ಸಮೇತ ಗದ್ದೆಯಲ್ಲಿ ಊರುತ್ತಾರೆ. ಬಿಹಾರಿಗಳು ಸಸಿಗಳನ್ನು ಕಾಲಿಗೆ ಹೊಡೆದುಕೊಂಡು ಬೇರಲ್ಲಿನ ಮಣ್ಣನ್ನೆಲ್ಲ ಕೊಡವಿ ನಾಟಿ ಮಾಡುತ್ತಾರೆ. ಇದು ಭತ್ತದ ಸಸಿಗಳ ಉತ್ತಮ ಬೆಳವಣಿಗೆಗೆ ನೆರವಾಗುತ್ತದೆ. ಸಾಲುಗಳು ನೀಟಾಗುವ ಜತೆಗೆ ಪ್ರತಿ ಸಾಲಿನ ನಡುವೆ ನಿರ್ದಿಷ್ಟ ಅಂತರ ಇರುವ ಕಾರಣ ಗಾಳಿ ಬೆಳಕು ಸುಗಮವಾಗಿರುತ್ತದೆ.
ಈ ಬಗ್ಗೆ ರೈತ ದಿನೇಶ್ ಪ್ರತಿಕ್ರಿಯಿಸಿ, "ಕಾರ್ಮಿಕರ ಸಮಸ್ಯೆ ಆಗಿದ್ದು, ಯುಪಿ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಕಾರ್ಮಿಕರು ಬರುತ್ತಿದ್ದರಿಂದ ಅನುಕೂಲ ಆಗ್ತಿದೆ. ಕೂಲಿ, ಸಮಯ ಉಳಿತಾಯ ಆಗ್ತಿದೆ. ಒಂದು ಎಕರೆಗೆ ಸ್ಥಳೀಯ ಕಾರ್ಮಿಕರು 4-5 ಎಕರೆ ನಾಟಿ ಮಾಡ್ತಾರೆ. ಉತ್ತರ ಭಾರತದ ಕಾರ್ಮಿಕರು ಒಂದು ದಿನಕ್ಕೆ 8-10 ಎಕರೆ ಭತ್ತ ನಾಟಿ ಮಾಡುತ್ತಾರೆ. ಮಲೇಬೆನ್ನೂರು, ನಿಟ್ಟೂರು ಭಾಗದಲ್ಲಿ 200 ಜನ ಕೂಲಿ ಕಾರ್ಮಿಕರು ಬಂದಿದ್ದಾರೆ. ಇವರು ನಾಟಿ ಒಡೆದು ಹಚ್ಚುವುದರಿಂದ ಇಳುವರಿ ಹೆಚ್ಚು ಬರಲಿದೆ. ಸ್ಥಳೀಯರು ಒಂದು ಎಕರೆಗೆ 3500 ಕೂಲಿ ಪಡೆದ್ರೆ, ಇವರು 4500 ಕೂಲಿ ಪಡೆಯುತ್ತಾರೆ. ಏಜೆಂಟ್ ಪಡೆದು ಬಳಿಕ ಕೂಲಿ ಕಾರ್ಮಿಕರಿಗೆ ಕೂಲಿ ಎಷ್ಟು ತಲುಪುತ್ತದೆ ಗೊತ್ತಿಲ್ಲ" ಎಂದರು.
ಇದನ್ನೂ ಓದಿ : ಶಾಲಾ ಮಕ್ಕಳಿಗೆ ನಾಟಿ ಕಲಿಕೆ: ಖುಷಿಯಿಂದಲೇ ಕೃಷಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು..