ಚಾಮರಾಜನಗರ: ಚಾಮರಾಜನಗರದಲ್ಲಿಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್ ಜಿಪಂ ಸಭಾಂಗಣದಲ್ಲಿ ನಗರ ಅಭಿವೃದ್ಧಿ ಪ್ರಾಧಿಕಾರ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಕೆಯುಐಡಿಎಫ್ಸಿ ಹಾಗೂ ಕರ್ನಾಟಕ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆ ಆರಂಭದಿಂದಲೇ ಅಧಿಕಾರಿಗಳ ಕಾರ್ಯ ವೈಖರಿಗೆ ಕೆಂಡಾಮಂಡಲರಾದ ಸಚಿವರು ನಗರಸಭೆ, ನಗರ ಮತ್ತು ಗ್ರಾಮಾಂತರ ಯೋಜನೆ ಅಧಿಕಾರಿಗಳು ಹಾಗೂ ಒಳಚರಂಡಿ ಇಲಾಖೆಗೆ ಅಧಿಕಾರಿಗಳಿಗೆ ಬೆವರಿಳಿಸಿದರು.
![MINISTERS ANGRY OFFICERS WORK CHAMARAJANAGAR](https://etvbharatimages.akamaized.net/etvbharat/prod-images/05-07-2024/kn-cnr-02-minister-av-ka10038_05072024170210_0507f_1720179130_162.jpeg)
ಸಭೆಗೆ ಗೈರಾಗಿದ್ದ ಚಾಮರಾಜನಗರ ನಗರಸಭೆ ಎಇಇ ನಟರಾಜು ಅವರನ್ನು ಅಮಾನತು ಮಾಡುವಂತೆ ಸಚಿವ ಸುರೇಶ್ ಡಿಸಿ ಶಿಲ್ಪಾನಾಗ್ಗೆ ಸೂಚನೆ ಕೊಟ್ಟರು. ಬಳಿಕ, ಚಾಮರಾಜನಗರ ನಗರಸಭೆ ಆಯುಕ್ತ ರಾಮದಾಸ್, ನಗರ ಯೋಜನೆ ಅಧಿಕಾರಿ ರೇಣುಕಾ ಅವರು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ದೂರುಗಳು ಕೇಳಿ ಬಂದಿದ್ದರಿಂದ, ಶಾಸಕರು ಹಲವು ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆಂದು ಹರಿಹಾಯ್ದದ್ದರಿಂದ ಇವರಿಬ್ಬರನ್ನೂ ಬೇರೆಡೆ ವರ್ಗಾವಣೆ ಮಾಡಿ ಇಲಾಖೆ ಆಯುಕ್ತರಿಗೆ ಬೈರತಿ ಸೂಚನೆ ಕೊಟ್ಟರು.
![MINISTERS ANGRY OFFICERS WORK CHAMARAJANAGAR](https://etvbharatimages.akamaized.net/etvbharat/prod-images/05-07-2024/kn-cnr-02-minister-av-ka10038_05072024170210_0507f_1720179130_98.jpg)
ಚಾಮರಾಜನಗರ ಯೋಜನಾ ಅಧಿಕಾರಿಗಳು ಬಂದ ಅನುದಾನವನ್ನು ಬಳಸಿಕೊಳ್ಳದೇ ವಾಪಾಸ್ ಆದ ಮಾಹಿತಿ ಪಡೆದ ಸಚಿವ ವೆಂಕಟೇಶ್ ಗರಂ ಆದರು. ದುಡ್ಡು ಕೊಟ್ಟರೂ ಕೆಲಸ ಮಾಡದೇ ವಾಪಾಸ್ ಹೋಗಿದೆ, ನೀವೆಲ್ಲಾ ಅಧಿಕಾರಿಗಳಾಗಿ ಯಾಕೆ ಇರ್ತಿರಾ, 6 ತಿಂಗಳಾದರೂ ಯಾವ ಕೆಲಸವೂ ಪ್ರಗತಿಯಲ್ಲಿ ಇಲ್ಲವಲ್ಲಾ ಎಂದು ಛೀ ಮಾರಿ ಹಾಕಿದರು. ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ ಶೇ.50 ಒಳಚರಂಡಿ ವ್ಯವಸ್ಥೆ ಹಾಗೂ ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಶೇ.75ರಷ್ಟು ಯುಜಿಡಿ ವ್ಯವಸ್ಥೆ ಇಲ್ಲದಿರುವುದನ್ನು ತಿಳಿದು ಕೂಡಲೇ ಅಂದಾಜು ಪಟ್ಟಿ ಕಳುಹಿಸಿ ಹಣ ಕೊಡುತ್ತೇನೆ ಎಂದು ಸುರೇಶ್ ಭರವಸೆ ಕೊಟ್ಟರು.
ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರವು ಹೊಸ ಲೇಔಟ್ಗಳನ್ನು ಮಾಡಿ, ಚುಡಾದ ಮಾಸ್ಟರ್ ಪ್ಲಾನ್ಗೆ ಎರಡು ದಿನದಲ್ಲಿ ಅನುಮೋದನೆ ಕೊಡಿಸುತ್ತೇನೆ ಎಂದು ಸುರೇಶ್ ತಿಳಿಸಿದರು. ಇದೇ ವೇಳೆ, ಎ ಖಾತಾ ಮತ್ತು ಬಿ ಖಾತಾ ಮಾಡಲು ಮತ್ತೊಂದು ಅವಕಾಶ ಕೊಡಲಿದ್ದು, ಈ ಬಾರಿ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಿದೆ. ಒಂದು ನಿರ್ಧಿಷ್ಟ ಸಮಯದ ಅವಕಾಶ ಕೊಟ್ಟು ಎ ಮತ್ತು ಬಿ ಖಾತಾ ಮಾಡಿಸಿಕೊಳ್ಳಲು ಅವಕಾಶ ನೀಡುತ್ತೇವೆ ಎಂದು ಸಭೆಗೆ ಸಚಿವ ಸುರೇಶ್ ಮಾಹಿತಿ ನೀಡಿದರು.
ಪೌರಾಡಳಿತ ಸಚಿವ ರಹೀಂ ಖಾನ್ ಮಾತನಾಡಿ, ಹೊಸದಾಗಿ 151 ಇಂದಿರಾ ಕ್ಯಾಂಟಿನ್ ತೆರೆಯಲಾಗುವುದು. ಕ್ಯಾಂಟಿನ್ ಅನ್ನು ಮತ್ತಷ್ಟು ಸಶಕ್ತಗೊಳಿಸಲು, ಜನರಿಗೆ ಬಗೆಬಗೆಯ ಆಹಾರ ಕೊಡಲು ಪ್ರದೇಶವಾರು ಮೆನು ಬದಲಿಸಲಾಗಿದೆ ಎಂದರು. ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ ಹಾಗೂ ಗಣೇಶ್ ಪ್ರಸಾದ್ ಇದ್ದರು.