ಬೆಂಗಳೂರು : ವಾಹನಗಳಿಗೆ ಮಾಡಿರುವ ಹಾನಿ ಪ್ರಶ್ನಿಸಿದ್ದಕ್ಕೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಭೀಮಾ ಜ್ಯುವೆಲರಿ ಶಾಪ್ ಮಾಲೀಕ ಹಾಗೂ ಅಂಗರಕ್ಷಕರು ಸೇರಿ ಮೂವರು ಆರೋಪಿಗಳನ್ನು ಹೆಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಚ್ಎಸ್ಆರ್ ಲೇಔಟ್ನ ಬಿಡಿಎ ಕಾಂಪ್ಲೆಕ್ಸ್ನಲ್ಲಿರುವ ಅಡ್ಯಾರ್ ಆನಂದ್ ಭವನ (ಎಟುಬಿ) ರೆಸ್ಟೋರೆಂಟ್ ಮಾಲೀಕ ಎಸ್. ತಿರುಸೆಲ್ವಂ ಎಂಬವರು ನೀಡಿದ ದೂರು ಆಧರಿಸಿ ಭೀಮಾ ಜ್ಯುವೆಲರಿ ಶಾಪ್ ಮಾಲೀಕ ವಿಷ್ಣು ಶರಣ್ ಭಟ್, ಅವರ ಅಂಗರಕ್ಷರಾಗಿದ್ದ ಕೆವಿನ್ ಥಾಮಸ್ ಹಾಗೂ ಸತೀಶ್ ಸ್ವಾಮಿ ಎಂಬವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ : ಫೆ.9ರಂದು ಹೋಟೆಲ್ಗೆ ಬಂದಿದ್ದ ವಿಷ್ಣು ಶರಣ್ ಟೀ ಕುಡಿದು ಹೊರಹೋಗುವಾಗ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ತಳ್ಳಿ ಹಾನಿಗೊಳಿಸಿ ಪರಾರಿಯಾಗಿದ್ದರು. ಈ ಬಗ್ಗೆ ತಡವಾಗಿ ಗಮನಿಸಿದ ದೂರುದಾರ ತಿರುಸೆಲ್ವಂ, ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವಿಡಿಯೋ ಕಂಡು ಸುಮ್ಮನಾಗಿದ್ದರು. ಫೆ.26ರಂದು ಮತ್ತೆ ವಿಷ್ಣು ಶರಣ್ ಹೋಟೆಲ್ಗೆ ಬಂದಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಮುಖಚಹರೆ ವ್ಯಕ್ತಿ ಪತ್ತೆಹಚ್ಚಿದ ದೂರುದಾರ, ಆರೋಪಿಯನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ನಿರಾಕರಿಸಿದ ವಿಷ್ಣು ಶರಣ್, ವಿಡಿಯೋ ಸಾಕ್ಷಿ ತೋರಿಸುವಂತೆ ಹೇಳಿದ್ದಾರೆ. ಈ ನಡುವೆ ಈತನ ಜೊತೆಯಲ್ಲಿದ್ದ ಅಂಗರಕ್ಷಕರು ಸಹ ಮಾತಿನ ಚಕಮಕಿ ನಡೆಸಿದ್ದಾರೆ. ಮಾತಿನ ಸಂಘರ್ಷ ಹೆಚ್ಚಾಗುತ್ತಿದ್ದಂತೆ ತನ್ನ ಬಳಿಯಿದ್ದ ಚಾಕು ತೋರಿಸಿ, ವಿಷ್ಣು ಶರಣ್ ಜೀವ ಬೆದರಿಕೆ ಹಾಕಿದ್ದಾರೆ. ಹೊರ ಹೋಗುವಾಗ ದೂರುದಾರರ ಕಾರಿಗೂ ಗುದ್ದಿ ಹಾನಿಗೊಳಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ದೂರಿನ ಮೇರೆಗೆ ಮೂವರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಮೊದಲ ಆರೋಪಿಯಾಗಿರುವ ವಿಷ್ಣು ಶರಣ್, ದೂರುದಾರರ ವಾಹನಗಳಿಗೆ ಹಾನಿ ಮಾಡಿರುವುದಕ್ಕೆ ನಿಖರ ಕಾರಣ ತಿಳಿಸಿಲ್ಲ. ಕೃತ್ಯವೆಸಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೇಳಿಕೆ ಆಧಾರದ ಮೇರೆಗೆ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿ ಕೃತ್ಯವೆಸಗಿರುವುದು ಮೆಲ್ನೋಟಕ್ಕೆ ಕಂಡುಬಂದಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಷ್ಣು ಶರಣ್ ವಿರುದ್ಧ ಮತ್ತೊಂದು ಎಫ್ಐಆರ್ : ಬಲವಂತವಾಗಿ ಕೂಡಿಟ್ಟು ಹಲ್ಲೆ ಮಾಡಿರುವುದಾಗಿ ಆರೋಪಿಸಿ ಜಯನಗರದ ಭೀಮಾ ಜ್ಯುವೆಲರಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿ ವಿಷ್ಣು ಎಂಬವರು ನೀಡಿದ ಮೇರೆಗೆ ಮಾಲೀಕ ವಿಷ್ಣು ಶರಣ್ ಸೇರಿ ಆರು ಮಂದಿ ವಿರುದ್ಧ ಕೋರಮಂಗಲ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವಿಷ್ಣು, ಕೆಲಸ ಮಾಡುತ್ತಿದ್ದ ಶಾಪ್ನಿಂದ ಸುಮಾರು 50 ಗ್ರಾಂ ಚಿನ್ನವನ್ನು ಬೇರೆ ಜ್ಯುವೆಲರ್ಸ್ ಶಾಪ್ಗೆ ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ಫೆ.22ರಂದು ಭೀಮಾ ಜ್ಯುವೆಲರ್ಸ್ ಕ್ಲಸ್ಟರ್ ವಿನೋದ್, ಡೆಪ್ಯೂಟಿ ಕ್ಲಸ್ಟರ್ ದೀಪುಗೌಡ ಅವರು ಜಯನಗರ ಶಾಖೆಗೆ ಬಂದು ಚಿನ್ನದ ಬಗ್ಗೆ ವಿಚಾರಿಸಿ, ಬಳಿಕ ಕೋರಮಂಗಲ ಶಾಖೆಗೆ ಕರೆದೊಯ್ದು ಮಾಲೀಕ ವಿಷ್ಣು ಶರಣ್ಗೆ ವಿಷಯ ತಿಳಿಸಿದ್ದರು. ಶಾಪ್ನ ಕೆಲ ಸಿಬ್ಬಂದಿ ಸೇರಿ ವಿಷ್ಣು ಅವರನ್ನು ಬಲವಂತವಾಗಿ ಕೂಡಿ ಹಾಕಿದ್ದರು ಎಂದು ದೂರಲಾಗಿದೆ.
ಬಳಿಕ ಮಾಲೀಕ ವಿಷ್ಣು ಶರಣ್ ಸ್ಥಳಕ್ಕೆ ಬಂದು ಕೈಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ಹಣ ಕೊಡದಿದ್ದರೆ ಬಿಡುಗಡೆ ಮಾಡುವುದಿಲ್ಲ ಎಂದು ಸಿಬ್ಬಂದಿಯಿಂದ ಪತ್ನಿಗೆ ಕರೆ ಮಾಡಿಸಿ ಬೆದರಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿಷ್ಣು ಆರೋಪಿಸಿದ್ದಾರೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರೈತರ ನಿದ್ದೆಗೆಡಿಸಿದ್ದ ಜಾನುವಾರು ಕಳ್ಳರ ಬಂಧನ: ಪ್ರಕರಣ ಭೇದಿಸಿದ ಹಾವೇರಿ ಪೊಲೀಸರು