ರಾಯಚೂರು : ಪಕ್ಕದ ತೆಲಂಗಾಣದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಹೀಗಾಗಿ, ರಾಜ್ಯದ ಗಡಿ ಜಿಲ್ಲೆ ರಾಯಚೂರು ಜಿಲ್ಲೆಯಲ್ಲಿಯೂ ಹಕ್ಕಿಜ್ವರದ ಆತಂಕ ಎದುರಾಗಿದೆ.
ಜಿಲ್ಲೆಯ ಮಾನವಿ ಪಟ್ಟಣ ಹಾಗೂ ರಬಣಕಲ್ ಸೇರಿ ಹಲವೆಡೆ ನಿತ್ಯ ಪಕ್ಷಿಗಳು ಸಾವನ್ನಪ್ಪುತ್ತಿದ್ದು, ಹಕ್ಕಿಜ್ವರದ ಸಂಶಯ ವ್ಯಕ್ತವಾಗಿದೆ.
ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಬಗೆಯ ಪಕ್ಷಿಗಳು ಮೃತಪಡುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮಕ್ಸೂದ್ ಅಲಿ ಎಂಬುವರ ತೋಟದಲ್ಲಿ ಪ್ರತಿದಿನ 8 ರಿಂದ 10 ಪಕ್ಷಿಗಳು ಸಾವನ್ನಪ್ಪುತ್ತಿವೆ. ಇದರಿಂದಾಗಿ ಇಲ್ಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಮರದ ಮೇಲೆ ಕೂರುವ ಪಕ್ಷಿಗಳು ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಕೆಲಹೊತ್ತಿನಲ್ಲಿಯೇ ಮೃತಪಡುತ್ತಿವೆ. ಕೆಳಗೆ ಬಿದ್ದ ಪಕ್ಷಿಗಳ ರಕ್ಷಣೆಗೆ ಮುಂದಾಗಿ ಕುಡಿಯಲು ನೀರು ಕೊಟ್ಟರೂ ಕುಡಿಯದೆ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಕ್ಷಿಗಳ ಸಾವಿಗೆ ನಿಖರ ಕಾರಣ ತಿಳಿಯದ ಕಾರಣ ಸ್ಥಳೀಯರಿಗೆ ಹಕ್ಕಿ ಜ್ವರದ ಭೀತಿ ಎದುರಾಗಿದೆ. ವಿಷಯ ತಿಳಿದು ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಪಶುವೈದ್ಯಾಧಿಕಾರಿ ಡಾ. ಬಸವರಾಜ ಹಿರೇಮಠ ಮಾತನಾಡಿ, ''ನಾವು ಇಲ್ಲಿಗೆ ಬಂದು ಪರಿಶೀಲಿಸಿದಾಗ ಮೂರು ನಾಲ್ಕು ಪಕ್ಷಿಗಳು ಡೆತ್ ಆಗಿದ್ದವು. ಹೀಗಾಗಿ, ಪಕ್ಷಿಗಳ ಕಳೇಬರ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ವರದಿ ಬಂದ ಬಳಿಕ ತಾಲೂಕಾಡಳಿತ ಮುಂದಿನ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಸಾರ್ವಜನಿಕರು ಭಯ ಭೀತರಾಗುವುದು ಬೇಡ. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ರೀತಿ ಪಕ್ಷಿಗಳು ಸಾವನ್ನಪ್ಪುತ್ತಿರುವ ಬಗ್ಗೆ ಸಾರ್ವಜನಿಕರು ನಮ್ಮ ಗಮನಕ್ಕೆ ತಂದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತೇವೆ'' ಎಂದು ಹೇಳಿದರು.
ಇದನ್ನೂ ಓದಿ : ಏವಿಯನ್ ಇನ್‌ಫ್ಲುಯೆಂಜಾ ಹಾವಳಿ: 5.4 ಲಕ್ಷ ಕೋಳಿಗಳು ಸಾವು; ಬೇಯಿಸಿದ ಮೊಟ್ಟೆ, ಮಾಂಸ ಸುರಕ್ಷಿತವೆಂದ ಸಚಿವ - AVIAN INFLUENZA