ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ, ಪೋಕ್ಸೋ ಮತ್ತು ಬಸ್‌ನಲ್ಲಿ ಯುವತಿಗೆ ಕಿರುಕುಳ ಸೇರಿದಂತೆ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಮೂರು ಪ್ರತ್ಯೇಕ ದೂರುಗಳು ಮಂಗಳೂರಲ್ಲಿ ದಾಖಲಾಗಿವೆ.
ಯುವತಿ ಮೇಲೆ ಅತ್ಯಾಚಾರ ಆರೋಪ: ಯುವಕನ ವಿರುದ್ಧ ಪ್ರಕರಣ ದಾಖಲು
ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಂಬಂಧ ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಯುವತಿ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ವಿನೋದ್‌ರಾಜ್ ಎಂಬಾತನ ಸ್ನೇಹವಾಗಿತ್ತು.
'ಮಾ.23ರಂದು ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕವೂ ಪದೇ ಪದೇ ಅತ್ಯಾಚಾರವೆಸಗಿದ್ದಾನೆ. ನಂತರ ಮದುವೆಯಾಗಲು ನಿರಾಕರಿಸಿ ಬೆದರಿಕೆ ಹಾಕಿದ್ದಾನೆ' ಎಂದು ಯುವತಿಯು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ದೂರಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ಪ್ರಕರಣ ದಾಖಲು
ಅಪ್ರಾಪ್ತ ಬಾಲಕಿಯ ಮೇಲೆ ನೆರೆಮನೆಯ ಯುವಕನೊಬ್ಬ ಅತ್ಯಾಚಾರವೆಸಗಿರುವ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 14 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಯುವಕ ವಿವಾಹವಾಗುವುದಾಗಿ ನಂಬಿಸಿ ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ಅತ್ಯಾಚಾರ ಎಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೂರು ನೀಡಲಾಗಿದೆ.
ಯುವತಿಗೆ ಕಿರುಕುಳ ಆರೋಪ: ಪ್ರಕರಣ ದಾಖಲು
ಮಂಗಳೂರು ನಗರದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಅಪರಿಚಿತ ಯುವಕನೋರ್ವ ಕಿರುಕುಳ ನೀಡಿದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂಪನಿಯೊಂದರ ಪ್ರಾಡಕ್ಟ್ ಸೇಲ್ ಕೆಲಸ ಮಾಡಿಕೊಂಡಿರುವ ಯುವತಿ ಶುಕ್ರವಾರ ಬೆಳಗ್ಗೆ 8ಕ್ಕೆ ಕಚೇರಿಗೆ ಹೋಗಿ ಪ್ರಾಡಕ್ಟ್ಗಳನ್ನು ತೆಗೆದುಕೊಂಡು ಮಾರಾಟ ಮಾಡಲು ಬಜ್ಪೆ ಕಡೆಗೆ ಹೋಗುವಾಗ ಖಾಸಗಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಯುವತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು 27-28 ವರ್ಷ ವಯಸ್ಸಿನ ಯುವಕ ತನ್ನ ಹಿಂಬದಿಯ ಸೀಟಿನಲ್ಲಿ ಕುಳಿತು ಕಿರುಕುಳ ನೀಡಿದ್ದಾನೆ ಎಂದು 19 ವರ್ಷದ ಯುವತಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು: ರಸ್ತೆಯಲ್ಲಿ ನಮಾಜ್ ಪ್ರಕರಣ, ಪೊಲೀಸರಿಂದ ಬಿ ರಿಪೋರ್ಟ್ - Namaz On Streets Case