ದೊಡ್ಡಬಳ್ಳಾಪುರ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಕೊಲೆ ಪ್ರಕರಣದ ಆರೋಪಿಗೆ ಯಲಹಂಕ ತಾಲ್ಲೂಕಿನ ಶ್ರೀರಾಮನಹಳ್ಳಿ ಸಮೀಪ ಇಂದು ಬೆಳಗ್ಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಆರೋಪಿಯ ಕಾಲಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇ 11ರಂದು ದೊಡ್ಡಬಳ್ಳಾಪುರ ಹೊರವಲಯದ ನವೋದಯ ಶಾಲೆ ಸಮೀಪ ಹೇಮಂತ್ ಗೌಡ ಎಂಬ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹಮೂರ್ತಿ ಅಲಿಯಾಸ್ ಮಿಟ್ಟೆ ಮತ್ತು ಆತನ ಸ್ನೇಹಿತರ ಮೇಲೆ ಪ್ರಕರಣ ದಾಖಲಾಗಿತ್ತು.
ಘಟನೆಯ ನಂತರ ಪೊಲೀಸರು ತಲೆಮರೆಸಿಕೊಂಡ ಆರೋಪಿಗಳ ಬೆನ್ನತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಆರೋಪಿ ಶ್ರೀನಿವಾಸ್ ಅಲಿಯಾಸ್ ಚಿಕ್ಕ ಮಿಟ್ಟೆ ಎಂಬಾತನನ್ನು ಬಂಧಿಸಲು ಹೋದಾಗ, ಪೊಲೀಸ್ ಕಾನ್‌ಸ್ಟೇಬಲ್ ಚಂದ್ರಶೇಖರ್ ಮೇಲೆ ಚಾಕುವಿನಿಂದ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದಾನೆ. ಆರೋಪಿಗೆ ಶರಣಾಗುವಂತೆ ಪೊಲೀಸರು ಗಾಳಿ ಗುಂಡು ಹಾರಿಸುವ ಮೂಲಕ ಎಚ್ಚರಿಕೆ ನೀಡಿದ್ದರು. ಹೀಗಿದ್ದರೂ ಆರೋಪಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸ್ ಇನ್‌ಸ್ಪೆಕ್ಟರ್ ಸಾಧಿಕ್ ಪಾಷಾ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಶ್ರೀನಿವಾಸ್ ಮತ್ತು ಗಾಯಗೊಂಡಿರುವ ಕಾನಸ್ಟೇಬಲ್ ಚಂದ್ರಶೇಖರ್ ಅವರನ್ನು ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಸಂಪಂಗಿರಾಮನಗರದಲ್ಲಿ ಶವ ಪತ್ತೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ - Youth Death Case