ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ, ಹುಬ್ಬಳ್ಳಿ ಅಂಕೋಲಾ ಯೋಜನೆ ಬಗ್ಗೆ ಯಾವುದೇ ಕಾಳಜಿ ವಹಿಸದ ಕೇಂದ್ರ ಸರ್ಕಾರ ಈ ಭಾಗದ ಜನರಿಗೆ ಏನು ಕೊಡಲು ಸಾಧ್ಯ. ಮೋದಿ ಗ್ಯಾರಂಟಿ ಹೆಸರಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ಯಾವ ದಾರಿಯಲ್ಲಿ ಹೊರಟಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಗದಗ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಲ್ಲಿ ಚುನಾವಣೆ ಪ್ರಚಾರಕ್ಕೆ ಹೋಗಲಿದ್ದೇನೆ. ಚುನಾವಣೆ ಪ್ರಾರಂಭವಾದಾಗ ಅಮಿತ್ ಶಾ, ಮೋದಿ ಹುರುಪಿನಲ್ಲಿದ್ದರು. ಈಗ ಚುನಾವಣೆ ಅವಲೋಕನ ಮಾಡಿದರೇ ನರೇಂದ್ರ ಮೋದಿಯವರ ಬಗ್ಗೆ ಜನರಲ್ಲಿ ಅವಿಶ್ವಾಸ ಬಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಿತ್ತೂರು ಕರ್ನಾಟಕ: ಬೇಡಿಕೆಗೆ ಸ್ಪಂದಿಸದಿದ್ದಕ್ಕೆ ನಾಗಾಲ್ಯಾಂಡ್ನ ಆರು ಜಿಲ್ಲೆಯವರು ವೋಟ್ ಮಾಡಲು ಹೋಗಿಲ್ಲ. ಪ್ರಜಾಪ್ರಭುತ್ವದಲ್ಲಿ ವಿಶ್ವಾಸ ಕಳೆದುಕೊಂಡಿರುವ ಸರ್ಕಾರ ಅಂದ್ರೆ ಮೋದಿ ನೇತೃತ್ವದ ಸರ್ಕಾರ. ಕಿತ್ತೂರು ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಜೋಶಿಯವರ ಬಗ್ಗೆ ಬಹಳಷ್ಟು ನಿರೀಕ್ಷೆ ಇತ್ತು. ನಿರೀಕ್ಷೆಗೆ ತಕ್ಕಂತೆ ಅಷ್ಟೇನು ಅಭಿವೃದ್ಧಿ ಆಗಿಲ್ಲ. ಆದರೆ ಯಾವ ಪುರುಷಾರ್ಥಕ್ಕೆ ಕರ್ನಾಟಕದ ಜನರು ಜೋಶಿ ಅವರನ್ನು ಆರಿಸಿ ಕಳಿಸಿದ್ದಾರೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಷ್ಟ್ರದ ಮಂತ್ರಿ ಆಗಿರಬೇಕಿದ್ದ ಪ್ರಲ್ಹಾದ್ ಜೋಶಿಯವರು ಹುಬ್ಬಳ್ಳಿ-ಧಾರವಾಡಕ್ಕೆ ಮಾತ್ರ ಸಚಿವರಾಗಿದ್ದಾರೆ. ರಾಜ್ಯಾದ್ಯಂತ ಬರ, ಬರ ಪರಿಹಾರದ ಪ್ರಶ್ನೆ ಬಂದಾಗ ಕಿಂಚಿತ್ತೂ ಚಕಾರ ಎತ್ತಿಲ್ಲ. ಜೋಶಿಯವರು ಒಂದೇ ಒಂದು ಸಮಸ್ಯೆಗೆ ಧ್ವನಿಯಾಗಿರುವ ಪ್ರಸಂಗವನ್ನು ಇಂದಿಗೂ ನಾವು ನೋಡಿಲ್ಲ ಎಂದು ಮೊಯ್ಲಿ ಹೇಳಿದ್ರು.