ದಾವಣಗೆರೆ : ಸಾವಿರಾರು ಮುಳ್ಳಿನ ರಾಶಿಯ ಮೇಲೆ ಕೂರುವುದು ಸಾಮಾನ್ಯ ಅಲ್ಲವೇ ಅಲ್ಲ. ಸಾಮಾನ್ಯವಾಗಿ ಕಾಲಿಗೆ ಒಂದು ಮುಳ್ಳು ಚುಚ್ಚಿದರೆ ಸಾಕಷ್ಟು ನೋವಾಗುತ್ತದೆ. ಆದರೆ ರಾಮಲಿಂಗೇಶ್ವರ ಕ್ಷೇತ್ರದಲ್ಲಿ ಪ್ರತಿ ವರ್ಷ ಮುಳ್ಳಿನ ಗದ್ದಿಗೆ (ಗದ್ದುಗೆ) ಮಹೋತ್ಸವ ನಡೆಯುತ್ತದೆ. ಈ ಮುಳ್ಳಿನ ಮಹೋತ್ಸವದಲ್ಲಿ ಸ್ವಾಮೀಜಿ ಒಬ್ಬರು ಸಾವಿರಾರು ಜಾಲಿ ಮುಳ್ಳಿನಿಂದ ಮಾಡಲ್ಪಟ್ಟ ಗದ್ದಿಗೆ ಮೇಲೆ ಕುಳಿತು ಅದರ ಮೇಲೆ ಹಾರಾರಿ ಪವಾಡ ಮಾಡುತ್ತಾರೆ. ನಂತರ ಶ್ರೀಗಳು ನುಡಿಯುವ ಕಾರ್ಣಿಕ ಭವಿಷ್ಯವನ್ನು ಕೇಳಿ ಭಕ್ತರು ಪುನೀತರಾಗುತ್ತಾರೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಹರನಹಳ್ಳಿ-ಕೆಂಗಾಪುರ ರಾಮಲಿಂಗೇಶ್ವರ ಪುಣ್ಯ ಕ್ಷೇತ್ರ ಮುಳ್ಳಿನ ಗದ್ದಿಗೆ ಪವಾಡಕ್ಕೆ ಹೆಸರುವಾಸಿ. ಈ ಪವಾಡಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಇಲ್ಲಿ ಪ್ರತಿ ವರ್ಷ ನಡೆಯುವಂತೆ ಈ ವರ್ಷವೂ ಕೂಡ 49ನೇ ವರ್ಷದ ಮುಳ್ಳಿನ ಗದ್ದಿಗೆ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು. ಮಾಜಿ ಸಂಸದ ವಿ ಎಸ್ ಉಗ್ರಪ್ಪ ಉತ್ಸವಕ್ಕೆ ಚಾಲನೆ ನೀಡಿದರು. ಗುರುವಾರ ಬೆಳಗಿನಜಾವ ಆರು ಗಂಟೆಯಿಂದಲೇ ಆರಂಭವಾದ ಮುಳ್ಳಿನ ಗದ್ದಿಗೆ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
ಈ ಪುಣ್ಯಕ್ಷೇತ್ರದ ರಾಮಲಿಂಗೇಶ್ವರ ಸ್ವಾಮೀಜಿಯವರು ಮುಳ್ಳಿನ ಗದ್ದಿಗೆ ಮೇಲೆ ಕುಳಿತು ಪವಾಡ ಸೃಷ್ಟಿಸಿದರು. ಸಾವಿರಾರು ಜಾಲಿ ಮುಳ್ಳುಗಳಿಂದ ನಿರ್ಮಾಣವಾದ ಗದ್ದಿಗೆ ಮೇಲೆ ಕೂರುವ ಸ್ವಾಮೀಜಿಯನ್ನು ಇಡೀ ಗ್ರಾಮದ ತುಂಬಾ ಮೆರವಣಿಗೆ ನಡೆಸುವುದು ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಇದಲ್ಲದೆ ಸ್ವಾಮೀಜಿ ಅವರು ಇದೇ ಮುಳ್ಳಿನ ಗದ್ದಿಗೆ ಮೇಲೆ ಹಾರಿ ಹಾರಿ ಕೂರುವ ದೃಶ್ಯ ಭಕ್ತರ ಮೈನವಿರೇಳಿಸಿತು.
ಮುಳ್ಳಿನ ಗದ್ದಿಗೆ ಪವಾಡ ಕಣ್ತುಂಬಿಕೊಳ್ಳಲು ಜಮಾಯಿಸಿದ ಭಕ್ತ ಗಣ : ಈ ಮುಳ್ಳಿನ ಗದ್ದಿಗೆ ಉತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಹಲವಾರು ಕಡೆಗಳಿಂದ ಸಾವಿರಾರು ಭಕ್ತರು ರಾಮಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸಿದ್ದರು. ಐದು ದಿನಗಳ ಕಾಲ ಉಪವಾಸ ಇರುವ ರಾಮಲಿಂಗೇಶ್ವರ ಸ್ವಾಮೀಜಿ ಐದನೇ ದಿನಕ್ಕೆ ಮುಳ್ಳಿನ ಗದ್ದಿಗೆಯ ಮೇಲೆ ಕೂತು ಪವಾಡ ಮಾಡಿದರು. ರಾಮಲಿಂಗೇಶ್ವರ ಪುಣ್ಯಕ್ಷೇತ್ರದಿಂದ ರಾಮಲಿಂಗೇಶ್ವರ ಶ್ರೀಯವರನ್ನು ಮುಳ್ಳಿನ ಗದ್ದಿಗೆ ಮೇಲೆ ಕೂರಿಸಿ ಭಕ್ತರು ಕೆಂಗಾಪುರದವರೆಗೆ ಮೆರವಣಿಗೆ ಸಾಗಿಸಿದರು. ಕೊನೆಯದಾಗಿ ಶ್ರೀಯವರು ಆಯಾ ವರ್ಷದ ದೃಷ್ಟಿಕೋನದಂತೆ ಕಾರ್ಣಿಕ ಹೇಳುತ್ತಾರೆ. ಮುಳ್ಳಿನ ಗದ್ದಿಗೆ ಮೂಲಕವೇ ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ರಾಮಲಿಂಗೇಶ್ವರ ಸ್ವಾಮೀಜಿ ಹತ್ತು ಹಲವಾರು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಅಕ್ಷರ ದಾಸೋಹಿಯಾಗಿದ್ದಾರೆ.

ರಾಮಲಿಂಗೇಶ್ವರ ಸ್ವಾಮೀಜಿಯವರ ಕಾರ್ಣಿಕ ಹೀಗಿದೆ : ರಾಮಲಿಂಗೇಶ್ವರ ಸ್ವಾಮೀಜಿ ಅವರು ''ಕಾರ್ಮೋಡ ಕವಿದಿತು, ಮುತ್ತಿನ ಹನಿಗಳು ಉದರಿತು.. ತೂಗುವ ತೊಟ್ಟಿಲು ಕೈತಪ್ಪಿತು.. ನಾನ್ ಇದ್ದೇನಲೇ ಪರಾಕ್' ಎಂದು ಕಾರ್ಣಿಕ ನುಡಿದರು.
ಭಕ್ತ ಜಯ ನಾಯ್ಕ್ ಪ್ರತಿಕ್ರಿಯಿಸಿ "ನಮಗೆ ಏನೇನು ಇರಲಿಲ್ಲ, ಇಲ್ಲಿ ನಡೆದುಕೊಂಡಾಗಿನಿಂದ ಒಳ್ಳೆ ಜೀವನ ಸಾಗಿಸುತ್ತಿದ್ದೇವೆ. ಇಲ್ಲಿನ ಪವಾಡ ದೊಡ್ಡದು, ಸಾಕಷ್ಟು ಪವಾಡ ನೋಡಿದ್ದೇನೆ. ಭಕ್ತರು ನಡೆದುಕೊಳ್ಳಬೇಕು, ಸ್ವಾಮೀಜಿ ಅವರ ಮುಳ್ಳಿನ ಪವಾಡ ಮಾಡುತ್ತಾರೆ. ಐದು ದಿನ ಉಪವಾಸ ಇದ್ದು ಮುಳ್ಳಿನ ಮೇಲೆ ಶ್ರೀ ಅವರು ಜಿಗಿದು ಪವಾಡ ಮಾಡುತ್ತಾರೆ. ಇಲ್ಲಿವರೆಗೆ ಶ್ರೀಗಳಿಗೆ ಏನೂ ಆಗಿಲ್ಲ" ಎಂದರು.

ಐದು ಜನ ಶಿಷ್ಯಂದಿರು ಮುಳ್ಳು ಕಡಿದುಕೊಂಡು ಬರುವ ಪ್ರತೀತಿ : "ಐದು ದಿನ ಸಪ್ತಾಹ ಕೂರುವ ಸ್ವಾಮೀಜಿ ಮುಳ್ಳಿನ ಮೇಲೆ ಕುಣಿಯುತ್ತಾರೆ, ಇದೊಂದು ಶಕ್ತಿಪೀಠ, ಮುಳ್ಳುಗಳನ್ನು ಐದು ಜನ ಶಿಷ್ಯಂದ್ರು ಕಡಿದುಕೊಂಡು ಬರಬೇಕು ಬಿಟ್ಟರೆ ಬೇರೆ ಯಾರೂ ಮುಟ್ಟುವಂತಿಲ್ಲ. ಮದುವೆ ಆಗದೆ ಇರುವ ಹೆಣ್ಣು ಮಕ್ಕಳಿಗೆ ಕಂಕಣಭಾಗ್ಯ ಕೂಡಿ ಬರುವುದು, ಸಂತಾನ ಇಲ್ಲದೆ ಇರುವವರಿಗೆ ಮಕ್ಕಳಾಗಿರುವ ಉದಾಹರಣೆಗಳಿವೆ" ಎಂದು ವಿಜಯಕುಮಾರ್ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷರು ಮಾಹಿತಿ ನೀಡಿದರು.

ಹರನಹಳ್ಳಿ-ಕೆಂಗಪುರ ಗ್ರಾಮಗಳಲ್ಲಿ ಹರಿದ್ರಾವತಿ ನದಿ ಹರಿಯುತ್ತದೆ. ಈ ನದಿ ತಟದಲ್ಲೇ ಶ್ರೀರಾಮಲಿಂಗೇಶ್ವರ ಮಠ ಇದೆ. ಮೊದಲಿಗೆ ಈ ಹರಿದ್ರಾವತಿ ನದಿಯಲ್ಲಿ ಪೂಜೆ ಪುನಸ್ಕಾರ ಮಾಡಿದ ನಂತರ ಆರಂಭವಾಗುವ ಮೆರವಣಿಗೆ ಮಠಕ್ಕೆ ಪ್ರವೇಶ ಮಾಡಿ ಶ್ರೀಗಳ ಮುಳ್ಳಿನ ಗದ್ದಿಗೆಯ ಮೂಲಕ ಕೆಂಗಪುರ ಗ್ರಾಮಕ್ಕೆ ಮೆರವಣಿಗೆ ಹೋಗುತ್ತದೆ. ಗ್ರಾಮ ಸಿಗುವ ತನಕ ಮುಳ್ಳಿನ ಗದ್ದಿಗೆ ಮೇಲೆ ಶ್ರೀ ಅವರು ಕುಣಿಯುವುದು, ಜಿಗಿಯುವುದು, ಕೂತು ಭಕ್ತರನ್ನು ಆಶೀರ್ವಾದ ಮಾಡುವುದು ಭಕ್ತರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಈ ಮುಳ್ಳಿನ ಪವಾಡದಿಂದಲೇ ಈ ಧಾರ್ಮಿಕ ಕ್ಷೇತ್ರ ಹೆಸರುವಾಸಿಯಾಗಿದೆ.
ಇದನ್ನೂ ಓದಿ: ಸಿಪಾಯಿ ದಂಗೆಯಿಂದ ಮಳೆ-ಬೆಳೆಯವರೆಗೆ..; ವರ್ಷದ ಭವಿಷ್ಯವೆಂದೇ ಖ್ಯಾತಿ ಪಡೆದ ಮೈಲಾರ ಕಾರ್ಣಿಕ