ಬೆಳಗಾವಿ: ಸುರಿಯುವ ಮಳೆಯನ್ನೂ ಲೆಕ್ಕಿಸದೇ ಬೆಳಗಾವಿಗೆ ಆಗಮಿಸಿದ ಚೆನ್ನಮ್ಮನ ವಿಜಯ ಜ್ಯೋತಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಅ.1ರಂದು ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ವಿಜಯ ಜ್ಯೋತಿಯು ರಾಜ್ಯದ ವಿವಿಧೆಡೆ ಸಂಚರಿಸಿ ಖಾನಾಪುರ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿತು. ಬುಧುವಾರ ಸಾಯಂಕಾಲ ಭಾರಿ ಮಳೆಯ ನಡುವೆಯೂ ಸಂಭ್ರಮ, ಸಡಗರದಿಂದ ಜ್ಯೋತಿಯನ್ನು ಜಿಲ್ಲಾಡಳಿತದಿಂದ ಬರಮಾಡಿಕೊಳ್ಳಲಾಯಿತು.
ಈ ವೇಳೆ ಉಪಮೇಯರ್ ಆನಂದ ಚೌಗುಲೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಉಪವಿಭಾಗಾಧಿಕಾರಿ ಶ್ರವಣ ನಾಯಕ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿ ಮತ್ತಿತರ ಗಣ್ಯರು ಜ್ಯೋತಿಗೆ ಪೂಜೆ ಸಲ್ಲಿಸಿ, ಚೆನ್ನಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಬಳಿಕ ಇಲ್ಲಿಂದ ಚೆನ್ನಮ್ಮನ ಜನ್ಮಭೂಮಿ ಕಾಕತಿಗೆ ಜ್ಯೋತಿಯನ್ನು ಬೀಳ್ಕೊಡಲಾಯಿತು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾಡಳಿತ ಮತ್ತು ಗಣ್ಯರು ಸೇರಿಕೊಂಡು ಜ್ಯೋತಿಯನ್ನು ಸ್ವಾಗತಿಸಿದ್ದೇವೆ. ಈ ಬಾರಿ 200ನೇ ಚೆನ್ನಮ್ಮನ ವಿಜಯೋತ್ಸವ ಹಿನ್ನೆಲೆಯಲ್ಲಿ ಮೂರು ದಿನ ಅದ್ಧೂರಿಯಾಗಿ ಉತ್ಸವ ಆಚರಿಸಲಾಗುತ್ತಿದೆ. ನಾಡಿನ ಎಲ್ಲ ಜನರು ಈ ಸಂಭ್ರಮದಲ್ಲಿ ಭಾಗಿಯಾಗುವಂತೆ ಕೋರಿದರು.
ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ಎಂದು ಹೇಳಲಾಗುತ್ತದೆ. ಆದರೆ, ಅದಕ್ಕಿಂತ 33 ವರ್ಷ ಮೊದಲೇ ಬ್ರಿಟಿಷರ ವಿರುದ್ಧ ಚೆನ್ನಮ್ಮ ಹೋರಾಟ ಮಾಡಿದ್ದರು. ಇದರ ಸ್ಮರಣಾರ್ಥ ನಾಡಿನಾದ್ಯಂತ ಸಂಚರಿಸಿದ ವಿಜಯ ಜ್ಯೋತಿಯನ್ನು ಮಳೆ ಮಧ್ಯೆಯೂ ಅಭಿಮಾನದಿಂದ ಬರಮಾಡಿಕೊಂಡಿದ್ದೇವೆ. ಕಿತ್ತೂರು ಉತ್ಸವ ಕೇವಲ ಕರ್ನಾಟಕಕ್ಕೆ ಮಾತ್ರ ಸಿಮೀತವಾಗದೇ ದೇಶಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಾಹಿತಿಗಳಾದ ಡಾ.ಸಿ.ಕೆ.ಜೋರಾಪುರ, ಶ್ರೀರಂಗ ಜೋಶಿ, ಅಶೋಕ ಮಳಗಲಿ, ಸಿ.ವೈ.ಮೆಣಶಿನಕಾಯಿ ಸೇರಿ ಮತ್ತಿತರರು ಇದ್ದರು.