ಬೆಂಗಳೂರು: ರಾಜ್ಯದ ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿಯ ಸಹಯೋಗದೊಂದಿಗೆ ಇಂದಿನಿಂದ ಕರ್ನಾಟಕ ಇಂಟರ್ನ್ಯಾಷನಲ್ ಟೂರಿಸಂ ಎಕ್ಸ್‌ಪೋ-2025 (KITE) ಅನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಎಕ್ಸ್‌ಪೋಗೆ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಗುರುವಾರ ಚಾಲನೆ ನೀಡಿದರು.
ರಾಜ್ಯದ ವಿವಿಧ ಪ್ರವಾಸಿ ತಾಣಗಳು, ನಮ್ಮ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ, ಕರಕುಶಲ ಉತ್ಪನ್ನಗಳು, ಪಾಕ ಪದ್ಧತಿ, ನೃತ್ಯ ಪ್ರಕಾರಗಳು, ಜೀವನ ಶೈಲಿ, ಅತಿಥಿ ಸತ್ಕಾರ ಇತ್ಯಾದಿಗಳ ಕುರಿತ 124 ಸ್ಟಾಲ್‌ಗಳು ಎಕ್ಸ್‌ಪೋನಲ್ಲಿವೆ. 36 ವಿವಿಧ ದೇಶಗಳ 92 ಇಂಟರ್ನ್ಯಾಷನಲ್ ಟ್ರಾವೆಲ್ಸ್ ಕಂಪನಿಗಳು, 15 ಸೋಶಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ಸ್ ಸೇರಿದಂತೆ ದೇಶದ ವಿವಿಧ ಭಾಗಗಳ ಟೂರ್ ಮ್ಯಾನೇಜ್ಮೆಂಟ್ ಕಂಪನಿಯ ಪ್ರತಿನಿಧಿಗಳು ಭಾಗಿಯಾಗಿದ್ದಾರೆ.
ಒಂದೇ ಸೂರಿನಡಿ ಪ್ರವಾಸೋದ್ಯಮ ವಲಯದ ವಿವಿಧ ಭಾಗಿದಾರರು: ಭಾರತದ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ನ ಒಕ್ಕೂಟ, ದೇಶೀಯ ಪ್ರವಾಸ ನಿರ್ವಾಹಕರ ಸಂಘಗಳ ಸಂಘ (ADTOI), ಭಾರತೀಯ ಸಾಹಸ ಪ್ರವಾಸ ನಿರ್ವಾಹಕರ ಸಂಘ (ATOAI), ಭಾರತೀಯ ಪ್ರವಾಸ ನಿರ್ವಾಹಕರ ಸಂಘ (IATO), ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (TAAI), BCIC, FKCCI, FHRAI, ಕರ್ನಾಟಕ ಪ್ರವಾಸೋದ್ಯಮ ವೇದಿಕೆ, ಎಂಟರ್‌ಪ್ರೈಸಿಂಗ್ ಏಜೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ETAA), SKAL, ದಕ್ಷಿಣ ಭಾರತ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ (SIHRA), ಟ್ರಾವೆಲ್ ಏಜೆಂಟ್ ಫೆಡರೇಶನ್ ಆಫ್ ಇಂಡಿಯಾ (TAFI) ಸೇರಿದಂತೆ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವ್ಯಾಪಾರ ಮತ್ತು ಆತಿಥ್ಯ ಸಂಘಟನೆ/ಒಕ್ಕೂಟಗಳು ಸೇರಿದಂತೆ ಪ್ರವಾಸೋದ್ಯಮ ವಲಯದ ಎಲ್ಲಾ ಭಾಗಿದಾರರು ಒಂದೇ ಸೂರಿನಡಿ ಭೇಟಿಯಾಗಲು KITE-2025 ವೇದಿಕೆಯಾಗಿದೆ.

KITE-2025ನಲ್ಲಿ ಕರ್ನಾಟಕದ ಐಕಾನಿಕ್ ಪ್ರವಾಸಿ ತಾಣಗಳು, ಉದಯೋನ್ಮುಖ ತಾಣಗಳು ಸುಸ್ಥಿರ ಪ್ರವಾಸೋದ್ಯಮ ಉತ್ತೇಜನಕ್ಕೆ ಆದ್ಯತೆ ನೀಡಲಾಗಿದೆ. ಕರ್ನಾಟಕದ ಶ್ರೀಮಂತ ಪರಂಪರೆ, ಪರಿಸರ ಪ್ರವಾಸೋದ್ಯಮದ ತಾಣಗಳು ಸೇರಿದಂತೆ ವೈವಿಧ್ಯಮಯ ಆಕರ್ಷಣೆಗಳನ್ನು ಹೈಲೈಟ್ ಮಾಡಲು ಒಂದು ವೇದಿಕೆಯನ್ನು KITE-2025 ಒದಗಿಸುತ್ತಿದೆ. ರಾಜ್ಯದ ಸಾಹಸ ತಾಣಗಳು ಮತ್ತು ಕ್ಷೇಮ ಕೇಂದ್ರಗಳ ಕುರಿತು ಅಂತರಾಷ್ಟ್ರೀಯ ಖರೀದಿದಾರರು, ರಾಯಭಾರಿಗಳು ಆಯಾ ದೇಶಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಆ ಮೂಲಕ ಅವುಗಳ ಗೋಚರತೆ ಹೆಚ್ಚಲಿದೆ. ಸ್ಥಳೀಯ ಪ್ರವಾಸೋದ್ಯಮ ವ್ಯವಹಾರಗಳನ್ನು ಜಾಗತಿಕ ಖರೀದಿದಾರರು, ನಿರ್ವಾಹಕರು ಮತ್ತು ಟ್ರಾವೆಲ್ಸ್ ಏಜೆನ್ಸಿಗಳೊಂದಿಗೆ ಸಂಪರ್ಕಿಸುವ ಮೂಲಕ ಪಾಲುದಾರಿಕೆ ಮತ್ತು ಸಹಯೋಗಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಸ್ಥಳೀಯ ಉದ್ಯಮಗಳಿಗೆ ಉತ್ತೇಜನ: ಕರ್ನಾಟಕದ ಸಣ್ಣ ಮತ್ತು ಮಧ್ಯಮ ಪ್ರವಾಸೋದ್ಯಮ ಉದ್ಯಮಗಳು ಜಾಗತಿಕ ಮಾರುಕಟ್ಟೆಗಳಿಗೆ ಒಡ್ಡಿಕೊಳ್ಳಲು ಅನುಕೂಲವಾಗುವಂತಹ ಗ್ರಾಹಕರ ನೆಲೆಯನ್ನು ಪಡೆಯಲು ಇದು ಸಹಕಾರಿಯಾಗಲಿದೆ. ಪ್ರವಾಸೋದ್ಯಮವು ಸ್ಥಳಿಯ ವಸತಿ, ಊಟ, ಸಾರಿಗೆ ಮತ್ತು ಸ್ಥಳೀಯ ಆಕರ್ಷಣೆಗಳ ಮೇಲೆ ಹೆಚ್ಚಿನ ಹಣ ತೊಡಗಿಸಲು ಕಾರಣವಾಗಲಿದೆ.

ಕಡಿಮೆ ತಿಳಿದಿರುವ ತಾಣಗಳಿಗೆ ಉತ್ತೇಜನ: KITE-2025 ರಾಜ್ಯದ ಆಫ್‌ಬೀಟ್ ಪ್ರವಾಸಿ ತಾಣಗಳು ಮತ್ತು ಹೊಸ ಹೊಸ ಸ್ಥಳಗಳನ್ನು ಹೈಲೈಟ್ ಮಾಡಲು ಅನುವು ಮಾಡಿಕೊಡಲಿದೆ. ಅವುಗಳತ್ತ ಪ್ರವಾಸಿಗರನ್ನು ಆಕರ್ಷಿಸಲಿದೆ ಮತ್ತು ಈಗಾಗಲೇ ಸ್ಥಾಪಿತ ಪ್ರವಾಸಿ ತಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಪ್ರವಾಸೋದ್ಯಮ ಉತ್ತೇಜನದ ಮೂಲಕ, ರಾಜ್ಯವು ಸಮತೋಲಿತ ಆರ್ಥಿಕ ಬೆಳವಣಿಗೆ, ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಹೆಚ್ಚಿಸಲು ಅನುಕೂಲಕರವಾಗಲಿದೆ.
ಇದನ್ನೂ ಓದಿ: ಹಂಪಿ ಉತ್ಸವ - 2025 ; ಅಂತಿಮ ಸಿದ್ಧತೆ ಪೂರ್ಣ