ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳು ಸೇರಿದಂತೆ ಹಾಲಿ ಮತ್ತು ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರು ಕನ್ನಡಪರ ಹೋರಾಟಗಾರರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ವಕೀಲ ಗಿರೀಶ್ ಭಾರದ್ವಾಜ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ. ಐ. ಅರುಣ್ ಅವರ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು 17ಕ್ಕೆ ಮುಂದೂಡಿತು.
ಇದೊಂದು ಗಂಭೀರ ವಿಚಾರವಾಗಿದ್ದು, ಪ್ರಭಾವಿ ವ್ಯಕ್ತಿಗಳ ವಿರುದ್ಧದ 43 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸರ್ಕಾರದ ಕ್ರಮ ನಿಯಮಬಾಹಿರವಾಗಿದ್ದರೆ ಕೋರ್ಟ್ ಒಪ್ಪುವುದಿಲ್ಲ ಎಂದು ಪೀಠ ಮೌಖಿಕವಾಗಿ ತಿಳಿಸಿದೆ.
ಅಲ್ಲದೆ, ಅರ್ಜಿದಾರರ ಪರ ವಕೀಲರು ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಕೆಲವು ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಅಪರಾಧ ದಂಡ ಸಂಹಿತೆ ಸೆಕ್ಷನ್ 321ಕ್ಕೆ ವಿರುದ್ಧವಾಗಿ ಸರ್ಕಾರ ಹಿಂಪಡೆದಿದೆ ಎಂದು ಹೇಳಿರುವುದು ಮೇಲ್ನೋಟಕ್ಕೆ ಸಮರ್ಥನೀಯವಾಗಿದೆ. ಅಭಿಯೋಜನಾ ಇಲಾಖೆ ಪ್ರಕರಣಗಳು ವಾಪಸ್ ಪಡೆಯಲು ಅರ್ಹವಲ್ಲವೆಂದು ಹೇಳಿದ್ದರೂ ಸಹ ಸರ್ಕಾರ ತನ್ನ ವ್ಯಾಪ್ತಿ ಮೀರಿ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ, ಸಚಿವ ಸಂಪುಟದ ಕ್ರಮ ನಿಯಮಬಾಹಿರವಾಗಿದ್ದರೆ ಕೋರ್ಟ್‌ಗಳು ಒಪ್ಪುವುದಿಲ್ಲ, ಪ್ರಕರಣಗಳನ್ನು ಹಿಂಪಡೆಯಲು ಅನುಮತಿ ನೀಡುವುದಿಲ್ಲ ಎಂದು ಪೀಠ ಹೇಳಿದೆ.
ವಕೀಲರ ವಾದ : ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ''ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ. ಆ ವಿಚಾರದಲ್ಲಿ ಸಾರ್ವಜನಿಕ ಅಭಿಯೋಜಕರು ನಿರ್ಧರಿಸಬೇಕು. ಆದರೆ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಿಆರ್‌ಪಿಸಿ ಸೆಕ್ಷನ್ 321 ಅನ್ವಯ ಪ್ರಕರಣಗಳನ್ನು ಹಿಂಪಡೆಯಲು ಅವಕಾಶವಿಲ್ಲವೆಂದು ಹೇಳಿದೆ. ಆದರೂ ಇಂತಹ ನಿಯಮಬಾಹಿರ ತೀರ್ಮಾನ ಕೈಗೊಂಡಿದೆ'' ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪೀಠ, ''ಯಾರ ವಿರುದ್ಧ ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ?'' ಎಂದು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ವಕೀಲರು, ''ರಾಜಕಾರಣಿಗಳು ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ವಿರುದ್ಧದ ಕೇಸುಗಳನ್ನು ಹಿಂಪಡೆಯಲಾಗುತ್ತಿದೆ. ಆದರೆ ಆಶ್ಚರ್ಯಕರ ಸಂಗತಿ ಎಂದರೆ ಗೃಹ ಇಲಾಖೆ ಈ ಪ್ರಸ್ತಾವವನ್ನು ತಿರಸ್ಕರಿಸಿದೆ'' ಎಂದು ಹೇಳಿದರು.
ಈ ವೇಳೆ ಪೀಠ, ''ನಿಮ್ಮ ಪ್ರಕಾರ ಈ ಪ್ರಸ್ತಾವವನ್ನು ರಾಜ್ಯಮಟ್ಟದಲ್ಲಿ ಮಂಡಿಸಲಾಗಿದೆಯೇ?'' ಎಂದು ಕೇಳಿತು. ಅದಕ್ಕೆ ವಕೀಲರು, ''ಹೌದು, ಕೇವಲ ಸಾರ್ವಜನಿಕ ಅಭಿಯೋಜಕರು ಮಾತ್ರ ಇಂತಹ ಪ್ರಸ್ತಾವ ಮಂಡಿಸಬಹುದಾಗಿದೆ'' ಎಂದು ಪೀಠಕ್ಕೆ ತಿಳಿಸಿದರು.
ವಾದ ಮುಂದುವರೆಸಿದ ವಕೀಲರು, ''ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳನ್ನು ಅನುಸರಿಸದೆ, 43 ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ನಿರ್ದೇಶನ ನೀಡಿದೆ. ಇದು ಅತ್ಯಂತ ಗಂಭೀರ ಮತ್ತು ಮಹತ್ವದ ವಿಚಾರವಾಗಿದೆ. ಅಭಿಯೋಜನಾ ಇಲಾಖೆ ಪ್ರಕರಣಗಳನ್ನು ವಾಪಸ್ ಪಡೆಯಲಾಗದು ಎಂದು ಅಭಿಪ್ರಾಯ ನೀಡಿದ್ದರೂ ಸಹ ಸರ್ಕಾರ ಆದೇಶ ಹೊರಡಿಸಿದೆ. ವಾಪಸ್ ಪಡೆಯುತ್ತಿರುವ ಪ್ರಕರಣಗಳಲ್ಲಿ ಹುಬ್ಬಳ್ಳಿ ಗಲಭೆ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ ಮತ್ತಿತರವುಗಳಿವೆ. ಆ ಕೇಸುಗಳು ಗಂಭೀರವಾದ ಕಾರಣ ಅಭಿಯೋಜನಾ ಇಲಾಖೆ ವಾಪಸ್ ಪಡೆಯುವ ಪ್ರಸ್ತಾವನೆಯನ್ನು ತಿರಸ್ಕರಿಸಿದೆ'' ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದನ್ನೂ ಓದಿ: ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಿಗೆ ಸಂಪುಟ ದರ್ಜೆ ಸ್ಥಾನ ಪ್ರಶ್ನಿಸಿ ಅರ್ಜಿ : ಸರ್ಕಾರಕ್ಕೆ ನೋಟಿಸ್