ಬೆಂಗಳೂರು: ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೆಚ್ಚದ ಹಣವನ್ನು ವಿದ್ಯಾರ್ಥಿಗಳಿಂದಲೇ ವಸೂಲಿ ಮಾಡಬೇಕು ಎಂದು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗತಿಗೆಟ್ಟ ಸರ್ಕಾರ ಎಂದು ಕಟುವಾಗಿ ಟೀಕೆ ಮಾಡಿರುವ ಅವರು, ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು. ಪರೀಕ್ಷಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮೂಲಕ ಒತ್ತಾಯಿಸಿದ್ದಾರೆ.
ಜನತೆಗೆ 5 ಗ್ಯಾರಂಟಿ ಯೋಜನೆ ಕೊಟ್ಟೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ಅದೆಷ್ಟು ಅಧಃಪತನಕ್ಕೆ ಹೋಗಿದೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲಿದೆ. ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ಸರ್ಕಾರ, ಈಗ ಎಸ್ಎಸ್ಎಲ್ಸಿ ಮಕ್ಕಳ ಕಿಸೆಗೂ ಕೈ ಹಾಕಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಅಕ್ರಮ ಸುಲಿಗೆಯಲ್ಲಿ 'ಸಿದ್ದಹಸ್ತ'ವಾಗಿರುವ ಸರ್ಕಾರ, ಈಗ ಕಾನೂನು ಬದ್ಧವಾಗಿಯೇ ಸುಲಿಗೆ ಮಾಡುತ್ತಿದೆ, ಅದೂ ಲಜ್ಜೆಗೆಟ್ಟು. ಇದೇ ಫೆಬ್ರವರಿ 26ರಿಂದ ಮಾರ್ಚ್ 3ರವರೆಗೂ ನಡೆಯಲಿರುವ 2023-24ನೇ ಸಾಲಿನ ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಆಗುವ ವೆಚ್ಚವನ್ನು ನಾಚಿಕೆಗೆಟ್ಟ ಸರ್ಕಾರ ಮಕ್ಕಳಿಂದಲೇ ವಸೂಲಿ ಮಾಡಲು ಹೊರಟಿದೆ ಎಂದು ಅವರು ದೂರಿದ್ದಾರೆ.
ಪ್ರಶ್ನೆಪತ್ರಿಕೆ ತಯಾರಿ, ಮುದ್ರಣ, ಸಾಗಣೆ ವೆಚ್ಚವನ್ನು ವಿದ್ಯಾರ್ಥಿಗಳ ಮೇಲೆಯೇ ಹೇರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ. ವೆಚ್ಚ ವಸೂಲಿ ಮಾಡುವಂತೆ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆದೇಶಿಸಿರುವುದು ಸರ್ಕಾರ ಎಷ್ಟರ ಮಟ್ಟಿಗೆ ದಿವಾಳಿ ಆಗಿದೆ ಎನ್ನುವುದಕ್ಕೆ ಉದಾಹರಣೆ ಎಂದು ಅವರು ಕಿಡಿಕಾರಿದ್ದಾರೆ.
ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರು ವೆಚ್ಚ ವಸೂಲಿ ಮಾಡಿ, ಆ ಮೊತ್ತವನ್ನು ಇಲಾಖೆ ಉಪ ನಿರ್ದೇಶಕರು (ಆಡಳಿತ), ಇವರ ಖಾತೆಗೆ ಜಮೆ ಮಾಡಬೇಕು ಎಂದು ಅವರು ಫರ್ಮಾನು ಹೊರಡಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿರುವ ಹೆಚ್ಡಿಕೆ, ಗ್ಯಾರಂಟಿ ಕೊಟ್ಟು ಬಡವರ ಉದ್ಧಾರ ಮಾಡುತ್ತಿದ್ದೇವೆ ಎಂದು ಬೀಗುವ ಸರ್ಕಾರಕ್ಕೆ, ಅದೇ ಬಡಮಕ್ಕಳಿಗೆ 50 ರೂ. ಖರ್ಚು ಮಾಡಲು ಗತಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಬರದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಸರ್ಕಾರ ಬರೆಯ ಮೇಲೆ ಬರೆ ಎಳೆಯುತ್ತಿದೆ. ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು, ಪರೀಕ್ಷೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿ ಬಿಜೆಪಿ ನಾಯಕರು ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ : ಡಿ ಕೆ ಸುರೇಶ್