ಬೆಂಗಳೂರು: ಚಿತ್ರಮಂದಿರಗಳು ಮಾರಾಟ ಮಾಡುವ ಟಿಕೆಟ್ ದರದ ಮೇಲೆ ಶೇ.1ರಿಂದ 2ರಷ್ಟು ಸೆಸ್ ಸಂಗ್ರಹಿಸಿ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಕಾಯ್ದೆ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರವಾದ ಈ ಮಸೂದೆಯನ್ನು ರಾಜ್ಯಪಾಲರು ಹೆಚ್ಚಿನ ವಿವರಣೆ ಕೋರಿ ವಾಪಸ್ ಕಳುಹಿಸಿದ್ದರು. ಬಳಿಕ ಸರ್ಕಾರ ವಿವರಣೆ ನೀಡಿದ್ದು, ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕಿದ್ದಾರೆ. ಇದೀಗ ಕಾಯ್ದೆ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪ್ರಯೋಜನಗಳೇನು?: ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಕ್ಷೇಮಾಭಿವೃದ್ಧಿ ಮಂಡಳಿ ರಚನೆಯಾಗಲಿದೆ. ಕಾರ್ಮಿಕ ಸಚಿವ, ಕಾರ್ಮಿಕ ಇಲಾಖೆ ಪ್ರಧಾನ/ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಆಯುಕ್ತರು, ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತ 17 ಸದಸ್ಯರನ್ನು ಒಳಗೊಂಡ ಮಂಡಳಿ ರಚನೆಯಾಗಲಿದೆ. ಇದರ ಮೂಲಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರನ್ನು ನೋಂದಣಿ ಮಾಡಿಸಿ, ಅವರಿಗೆಲ್ಲ ಗುರುತಿನ ಚೀಟಿ ಕೊಟ್ಟು, ಆರೋಗ್ಯ ವಿಮೆ, ಜೀವವಿಮೆ ಮತ್ತಿತರ ಸಾಮಾಜಿಕ ಭದ್ರತೆ ನೀಡುವ ಅಂಶಗಳನ್ನು ಕಾಯ್ದೆ ಒಳಗೊಂಡಿದೆ.
ಇದನ್ನೂ ಓದಿ: ತಾಯಿ ಆಶಾ ಕಾರ್ಯಕರ್ತೆ, ತಂದೆ ಸಿಪಾಯಿ.. 9 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಹಳ್ಳಿ ಹುಡುಗಿ ಜಯಶ್ರೀ - KUD Convocation
ಸಿನಿಮಾ ಟಿಕೆಟ್ ಹಾಗೂ ಒಟಿಟಿ ಚಂದಾದಾರಿಕೆ ಮೇಲೆ ಶೇ.2 ಮೀರದಂತೆ ಶೇ.1ಕ್ಕಿಂತ ಕಡಿಮೆಯಾಗದಂತೆ ಸೆಸ್ ವಿಧಿಸಲಾಗುತ್ತದೆ. ಈ ಸೆಸ್ ಅನ್ನು ಕರ್ನಾಟಕ ಸಿನಿ, ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ.
ಈ ಕಾಯ್ದೆ ಯಾರಿಗೆ ಅನ್ವಯ?:
- ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಕಲಾವಿದರು.
- ಸಿನಿಮಾ ಕ್ಷೇತ್ರದ ಯಾವುದೇ ಕೌಶಲಯುಕ್ತ ಮತ್ತು ಕೌಶಲ ಅಗತ್ಯವಿಲ್ಲದ ಕೆಲಸದಲ್ಲಿ ತೊಡಗಿಸಿಕೊಂಡವರು.
- ಚಲನಚಿತ್ರ, ನಾಟಕ, ಸಂಗೀತ ಮತ್ತು ನೃತ್ಯ, ಜಾನಪದ, ಲಲಿತಕಲಾ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಗಳು ನಿರ್ವಹಿಸುವ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವವರು.
- ಏಕಪರದೆ ಚಿತ್ರಮಂದಿರ, ಮಲ್ಟಿಫ್ಲೆಕ್ಸ್, ದೂರದರ್ಶನ ವಾಹಿನಿಗಳು, ಓಟಿಟಿಗೆ ಸಂಬಂಧಿಸಿದಂತೆ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿರುವವರು.
- ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತನ/ಳ ಪತ್ನಿ/ಪತಿ, ಅಪ್ರಾಪ್ತ ಗಂಡುಮಕ್ಕಳು, ಅವಿವಾಹಿತ ಹೆಣ್ಣು ಮಕ್ಕಳು, ಪೋಷಕರು, ಸಂಪೂರ್ಣವಾಗಿ ಅವಲಂಬಿತರಾಗಿರುವ ಮಾನಸಿಕ ಅಸ್ವಸ್ಥ/ಅಂಗವಿಕಲ/ವಿಧವೆ ಹೆಣ್ಣುಮಕ್ಕಳಿಗೆ ಈ ಕಾಯ್ದೆ ಅನ್ವಯವಾಗಲಿದೆ.
ಇದನ್ನೂ ಓದಿ: "ಗೋಪಿಲೋಲ" ಟ್ರೇಲರ್ ರಿಲೀಸ್: ಅ.4ಕ್ಕೆ ಸಿನಿಮಾ ಬಿಡುಗಡೆ - Gopilola Trailer