ದಾವಣಗೆರೆ: ದಾವಣಗೆರೆಯ ಗೋಪಾಲ್ ಗೌಡ್ರು ನಿರುದ್ಯೋಗಿ ಯುವಕರ ಪಾಲಿನ ಅನ್ನದಾತ. ಸಾವಿರಾರು ಯುವಕರಿಗೆ ಎಸಿ, ಫ್ರಿಡ್ಜ್, ವಾಷಿಂಗ್ ಮಿಷನ್ ರಿಪೇರಿ ಬಗ್ಗೆ ಉಪನ್ಯಾಸ ನೀಡಿ ತರಬೇತಿ ಕೊಟ್ಟು ಅವರು ಬದುಕು ಕಟ್ಟಿಕೊಳ್ಳಲು ಟೊಂಕ ಕಟ್ಟಿ ನಿಂತಿದ್ದಾರೆ. ಇವರ ಬಳಿ ತರಬೇತಿ ಪಡೆದ ಯುವಕರು ಗಲ್ಫ್ ದೇಶಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಪ್ರತಿಷ್ಠಿತ ಕಂಪನಿಗಳಲ್ಲಿ ಟೆಕ್ನಿಷಿಯನ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಾವಣಗೆರೆ ನಗರದ ಎಂಸಿಸಿಬಿ ಬ್ಲಾಕ್ ನಿವಾಸಿ ಗೋಪಾಲ್ ಗೌಡ ಅವರು ಅಪ್ಪಟ ಪರಿಸರವಾದಿ. ಎಲ್ಲಿ ಮರಗಳಿಗೆ ಕೊಡಲಿ ಬೀಳುತ್ತದೆಯೋ ಅಲ್ಲಿ ಈ ಗೋಪಾಲ್ ಗೌಡ್ರು ಹಾಜರಿರುತ್ತಾರೆ. ನೂರಾರು ಗಿಡ ಮರಗಳನ್ನು ಪೋಷಿಸಿ ಬೆಳೆಸಿರುವ ಇವರು ಇದೀಗ ನಿರುದ್ಯೋಗಿ ಯುವಕರ ಬದುಕನ್ನೇ ಬದಲಾಯಿಸಿದ್ದಾರೆ. ಎಸಿ, ಫ್ರಿಡ್ಜ್, ವಾಷಿಂಗ್ ಮಿಷನ್ ರಿಪೇರಿ ಬಗ್ಗೆ ತರಬೇತಿ ನೀಡುವ ಗೋಪಾಲ್ ಗೌಡ್ರ ಬಳಿ ಸಾವಿರಾರು ಯುವಕರು ತರಬೇತಿ ಪಡೆದಿದ್ದಾರೆ.
1986ರಲ್ಲಿ ದಾವಣಗೆರೆಗೆ ಆಗಮಿಸಿದ ಗೋಪಾಲ್ ಗೌಡ ಅವರು ಕೆಲಸಕ್ಕಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೆಲಸಕ್ಕೆ ಅಲೆದು ಅಲೆದು ಸಾಕಾಗಿದ್ದ ಗೋಪಾಲ್ ಗೌಡ್ರು ತಮ್ಮದೇ ಸ್ವತಃ ಉದ್ಯೋಗ ತೆರೆದರು. ನಿರುದ್ಯೋಗ ನಿವಾರಣೆ ಮಾಡಲೇಬೇಕೆಂದು ಪಟ್ಟು ಹಿಡಿದ ಗೋಪಾಲ್ ಗೌಡ ಅವರು ಕೆಲಸ ಕಲಿಯುತ್ತೇನೆ ಎಂದು ಬಂದ ನಿರುದ್ಯೋಗಿ ಯುವಕರಿಗೆ ಎಸಿ, ಫ್ರಿಡ್ಜ್, ವಾಷಿಂಗ್ ಮಿಷನ್ ರಿಪೇರಿ ಬಗ್ಗೆ ಗುಣಮಟ್ಟದ ತರಬೇತಿ ನೀಡಿ ಉದ್ಯೋಗ ಪಡೆಯುವಂತೆ ಮಾಡಿದ್ದಾರೆ. ಕೆಲವರು ಬೆಳಗ್ಗೆ ಮನೆ ಮನೆ ಪೇಪರ್ ಹಾಕಿ, ಮತ್ತಷ್ಟು ಜನ ಹೋಟೆಲ್ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿ ಗೋಪಾಲ್ ಗೌಡ ಅವರ ಬಳಿ ತರಬೇತಿ ಪಡೆದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
ತರಬೇತಿ ಪಡೆದವರು ವಿದೇಶಿ ಕಂಪನಿಗಳಲ್ಲಿ ಉದ್ಯೋಗಿಗಳು: 1996-98ರಲ್ಲಿ ನಿರುದ್ಯೋಗ ನಿವಾರಣೆ ಮಾಡಬೇಕೆಂದು ಗೋಪಾಲ್ ಗೌಡ ಅವರು ದಾವಣಗೆರೆ ನಗರದ ಡಿಆರ್ಆರ್ ಪಾಲಿಟೆಕ್ನಿಕ್, ಜನ ಶಿಕ್ಷಣ ಸಂಸ್ಥೆಯಲ್ಲಿ ಯುವಕರಿಗೆ ತರಬೇತಿ ನೀಡಲು ಆರಂಭಿಸಿದರು. ಅಲ್ಲದೇ ತಮ್ಮ ಶಾಪ್ನಲ್ಲೂ ಯುವಕರು ತರಬೇತಿ ಪಡೆಯಬಹುದಿತ್ತು. ಇವರ ಬಳಿ ತರಬೇತಿ ಪಡೆದವರು ದೂರದ ಗಲ್ಫ್ ದೇಶಗಳಾದ ದುಬೈ, ಸೌದಿ ಅರೇಬಿಯಾ, ಕತಾರ್, ಮಸ್ಕತ್ ದೇಶಗಳಲ್ಲಿ ಸ್ಯಾಮ್ಸಂಗ್, ಗೋದ್ರೇಜ್ ನಂತಹ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಗೋಪಾಲ್ ಗೌಡ ಅವರು, "1986ರಲ್ಲಿ ದಾವಣಗೆರೆಗೆಯಲ್ಲಿ ಕೆಲಸಕ್ಕಾಗಿ ಕಷ್ಟಪಟ್ಟಿದ್ದೆ. ಅಂದಿನಿಂದ ನಿರುದ್ಯೋಗ ನಿವಾರಣೆ ಮಾಡಲೇಬೇಕೆಂದು ಯುವಕರಿಗೆ 1996 - 98 ರಲ್ಲಿ ಡಿಆರ್ಆರ್ ಪಾಲಿಟೆಕ್ನಿಕ್, ಜನಶಿಕ್ಷಣ ಸಂಸ್ಥೆ ತರಬೇತಿ ನೀಡಲು ಆರಂಭಿಸಿದೆ. ಸಾವಿರಾರು ಯುವಕರಿಗೆ ತರಬೇತಿ ನೀಡಿದ್ದು, ಐದು ನೂರಕ್ಕು ಹೆಚ್ಚು ತರಬೇತಿ ಪಡೆದ ಯುವಕರು ಗಲ್ಫ್ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಯಾಮ್ಸಂಗ್, ಗೋದ್ರೇಜ್, ಕಂಪನಿಗಳ ಸರ್ವೀಸ್ ಸೆಂಟರ್ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸೌದಿ ಅರೇಬಿಯಾ, ಕತಾರ್, ಮಸ್ಕತ್, ದುಬೈ, ರಾಷ್ಟ್ರಗಳಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಇದನ್ನು ನೋಡಿದ್ರೆ ತುಂಬಾನೆ ಸಂತೋಷ ಆಗುತ್ತದೆ" ಎಂದರು.
ಹೋಟೆಲ್ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡ್ತಿದ್ದವರಿಗೂ ತರಬೇತಿ: ಹೋಟೆಲ್ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡ್ತಿದ್ದ ಯುವಕರಿಗೆ ತರಬೇತಿ ನೀಡಿ ದೊಡ್ಡ ಟೆಕ್ನಿಷಿಯನ್ಗಳನ್ನಾಗಿ ಮಾಡಿದ್ದಾರೆ.
1998ರಲ್ಲಿ ತರಬೇತಿ ಪಡೆದು ಉದ್ಯೋಗಿಯಾಗಿರುವ ಪ್ರಶಾಂತ್ ಎಂಬುವರು ಪ್ರತಿಕ್ರಿಯಿಸಿ "1998 ರಲ್ಲಿ ವಾಷಿಂಗ್ ಮಿಷನ್, ವೈರಿಂಗ್ ಬಗ್ಗೆ ಎಂಟು ವರ್ಷಗಳ ಕಾಲ ತರಬೇತಿ ಪಡೆದಿದ್ದೆ. ಅವರಿಂದ ಒಂದೊಳ್ಳೆ ಜೀವನ ಕಟ್ಟಿಕೊಂಡಿದ್ದೇನೆ. ಕಷ್ಟದಿಂದ ಶ್ರಮ ಪಟ್ಟು ಕೆಲಸ ಕಲಿತದ್ದಕ್ಕಾಗಿ ಇದೀಗ ಒಳ್ಳೆಯ ಜೀವನ ಪಡೆದುಕೊಂಡಿದ್ದೇನೆ. ಹೋಟೆಲ್ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡ್ತಾ ತರಬೇತಿ ಪಡೆದು ಕೆಲಸ ಕಲಿತಿದ್ದೇನೆ. ಮನೆಯಲ್ಲಿ ಕಷ್ಟ ಇತ್ತು. ಇದೀಗ ನನ್ನ ಬಳಿ 6-8 ಜನ ಕೆಲಸ ಮಾಡ್ತಿದ್ದಾರೆ. ಅವರು ತರಬೇತಿ ಕೊಟ್ಟಿದ್ದರಿಂದ ಬದುಕುತ್ತಿದ್ದೇನೆ" ಎಂದರು.
ಇದನ್ನೂ ಓದಿ: IPLಗೆ ದಾರಿ ತೋರಿದ ಸೈಕಲ್: ಮೈಸೂರು ಯುವ ಕ್ರಿಕೆಟಿಗ ಮನ್ವಂತ್ ಸಾಧನೆ ಬಗ್ಗೆ ತಂದೆ - ತಾಯಿ ಹೇಳುವುದೇನು?