ಕಾರವಾರ(ಉತ್ತರ ಕನ್ನಡ): ಗುಜರಿ ಸಾಮಾನು ರಾಶಿ ಹಾಕಿದ್ದ ಗೋಡೌನ್‌ಗೆ ಬೆಂಕಿ ಹೊತ್ತಿಕೊಂಡು, ಲಾರಿಸಹಿತ ಅಪಾರ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಇಂದು ಜಿಲ್ಲೆಯ ಹೊನ್ನಾವರದಲ್ಲಿ ಸಂಭವಿಸಿತು.
ಗುಣವಂತೆ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿಯೇ ರಾಶಿ ಹಾಕಿದ್ದ ಗುಜರಿ ಸಾಮಾನು ಅಂಗಡಿಗೆ ಬೆಂಕಿ ಬಿದ್ದಿದೆ. ಮಧ್ಯಾಹ್ನದ ಸುಡು ಬಿಸಿಲಿನ ವೇಳೆ ಘಟನೆ ನಡೆಯಿತು. ನೋಡನೋಡುತ್ತಿದ್ದಂತೆ ಜ್ವಾಲೆ ಸಂಪೂರ್ಣ ಅಂಗಡಿಯನ್ನೇ ಆವರಿಸಿಕೊಂಡಿತು. ದಟ್ಟ ಹೊಗೆಯಿಂದ ಸಂಪೂರ್ಣ ಪ್ರದೇಶ ಕಾಣದಂತಾಗಿ ಅಂಗಡಿ ಪಕ್ಕದಲ್ಲೇ ಇದ್ದ ಲಾರಿ ಕೂಡ ಬೆಂಕಿಗೆ ಆಹುತಿಯಾಯಿತು.
ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಆರದ ಕಾರಣ ಮತ್ತು ಪಕ್ಕದ ಪ್ರದೇಶಕ್ಕೂ ಆವರಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಭಟ್ಕಳ ಅಗ್ನಿಶಾಮಕ ತಂಡಕ್ಕೂ ಮಾಹಿತಿ ನೀಡಲಾಯಿತು. ಇದೀಗ ಈ ಪ್ರದೇಶ ಸಂಪೂರ್ಣ ಹೊಗೆ ಹಾಗೂ ಬೆಂಕಿಯಿಂದ ಆವೃತವಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಘಟನೆ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ನಿಖರ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: ಹಾಸನ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ಸಾವು
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿ ಮನೆಯವರ ವಾಹನಗಳಿಗೆ ಬೆಂಕಿಯಿಟ್ಟ ರೌಡಿಶೀಟರ್ ಅಂಡ್ ಟೀಂ ಪೊಲೀಸರ ವಶಕ್ಕೆ