ಮೈಸೂರು: ಕಲೆಕ್ಷನ್ ವಿಚಾರಕ್ಕೆ ಮಂಗಳಮುಖಿಯರ ಎರಡು ಗುಂಪುಗಳು ಬೀದಿಯಲ್ಲೇ ಹೊಡೆದಾಡಿಕೊಂಡ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಜಗನ್ಮೋಹನ ಅರಮನೆಯ ಹತ್ತಿರ ಕಲೆಕ್ಷನ್ ಅಂದರೆ, ಭಿಕ್ಷೆ ಬೇಡುವ ವಿಚಾರದಲ್ಲಿ ಗಲಾಟೆ ನಡೆದಿದೆ. ಒಂದು ಕಡೆಯ ಏರಿಯಾಗೆ ಮತ್ತೊಂದು ಮಂಗಳಮುಖಿಯರ ಗುಂಪು ಬಂದು ಕಲೆಕ್ಷನ್ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಎರಡೂ ಕಡೆಯವರ ನಡುವೆ ಜನನಿಬಿಡ ರಸ್ತೆಯಲ್ಲೇ ಮಾರಾಮಾರಿ ನಡೆದಿದೆ.
ಹೊಡೆದಾಟದ ವೇಳೆ ಓರ್ವ ಮಂಗಳಮುಖಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ. ಮತ್ತೊಬ್ಬ ಮಂಗಳಮುಖಿಯ ಮೇಲೆ ರಸ್ತೆ ಮೇಲೆ ಬೀಳಿಸಿ ಥಳಿಸಲಾಗಿದೆ. ಮಂಗಳಮುಖಿಯು ರಸ್ತೆ ಮೇಲೆ ಬಿದ್ದುಕೊಂಡಿರುವುದು ಕಂಡುಬಂದಿದೆ. ಈ ಹೊಡೆದಾಟ ಕಂಡ ಜನರು ಕೆಲಕಾಲ ಬೆಚ್ಚಿಬಿದ್ದಿದ್ದಾರೆ. ಎರಡೂ ಗುಂಪುಗಳನ್ನು ಸಾರ್ವಜನಿಕರು ಸಮಾಧಾನಪಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹೀಗಾಗಿ, ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರೂ ಕೂಡ ಏನು ಮಾಡದ ಸ್ಥಿತಿಯಲ್ಲಿ ಹೊಡೆದಾಟದ ಸ್ಥಳದಲ್ಲೇ ನಿಂತಿದ್ದರು. ಘಟನೆಯ ದೃಶ್ಯ ಸೆರೆಯಾಗಿದ್ದು, ವೈರಲ್ ಆಗಿದೆ.
ಪ್ರಕರಣ ದಾಖಲು: ಈ ಬಗ್ಗೆ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಪೊಲೀಸರು ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇನ್ಮುಂದೆ ಈ ರೀತಿ ಘಟನೆಗಳು ಆಗದಂತೆ ಎಚ್ಚರ ವಹಿಸುವಂತೆ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ತಲ್ವಾರ್ ತೋರಿಸಿ ಡೆಲಿವರಿ ಬಾಯ್‌ಗಳನ್ನು ದೋಚುತ್ತಿದ್ದ ಮೂವರ ಬಂಧನ - Robbery Case