ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣಾ ಪ್ರಾಧಿಕಾರದಲ್ಲಿ (ರೇರಾ) ಖಾಲಿ ಇರುವ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಪ್ರಕ್ರಿಯೆ 2024ರ ಜನವರಿ 22ರಿಂದಲೇ ಪ್ರಾರಂಭವಾಗಿದ್ದು, ಅದನ್ನು ಮುಂದುವರೆಸಲು ಲೋಕಸಭಾ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಚುನಾವಣೆಯ ಘೋಷಣೆಯನ್ನು ಕಾರಣ ನೀಡಿ ನೇಮಕಾತಿ ಪ್ರಕ್ರಿಯೆಗಳನ್ನು ತಡೆಹಿಡಿಯಲು ಸಾಧ್ಯವಾಗದು. ಆದ್ದರಿಂದ ಈಗಾಗಲೇ ಆರಂಭವಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.
ಲೋಕಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರೇರಾ ಮೇಲ್ಮನವಿ ನ್ಯಾಯಾಧೀಕರಣಕ್ಕೆ ನಡೆಯುತ್ತಿದ್ದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಪ್ರಕ್ರಿಯೆಗಳನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಅದನ್ನು ಪ್ರಶ್ನಿಸಿ ಕೆಲವು ಪತ್ರಕರ್ತರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರೊಂದಿಗೆ ಕೆಲವು ರಿಯಲ್ ಎಸ್ಟೇಟ್‌ಗಳ ಸಂಸ್ಥೆಗಳೂ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ರೇರಾಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದಲ್ಲಿ ಈ ಕುರಿತ ಪ್ರಕರಣಗಳು ಹೈಕೋರ್ಟ್‌ಗೆ ಬರುವುದು ಕಡಿಮೆಯಾಗಲಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ. ರೇರಾಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ಮುಂದಿನ ಮೂರು ವಾರಗಳಲ್ಲಿ ನೇಮಕ ಮಾಡಬೇಕು ಎಂದು ಈ ಮೊದಲು 2024ರ ಫೆಬ್ರವರಿ 26ರಂದು ನ್ಯಾಯಪೀಠ ಆದೇಶಿಸಿತ್ತು. ಈ ಆದೇಶವನ್ನು ಅನುಷ್ಟಾನಗೊಳಿಸುವ ಸಂಬಂಧ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಾಲಾವಕಾಶ ನೀಡಬೇಕೆಂದು ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಚುನಾವಣೆ ಕಾರಣ ನೀಡಿ ನೇಮಕಾತಿಗಳನ್ನು ಸ್ಥಗಿತಗೊಳಿಸುವುದಕ್ಕೆ ಅವಕಾಶವಿಲ್ಲ. ಆದ್ದರಿಂದ ಈಗಾಗಲೇ ಪ್ರಾರಂಭವಾಗಿರುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ: ಕಪಿಲ್ ಮೋಹನ್ ವಿರುದ್ಧದ ಸಮನ್ಸ್ ರದ್ದುಪಡಿಸಿದ ಹೈಕೋರ್ಟ್ - High Court