ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತಗಟ್ಟೆ ಬಳಿ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದಡಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ಶುಕ್ರವಾರ ನಡೆದ ಮತದಾನ ಪ್ರಕ್ರಿಯೆ ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಸುದ್ದಗುಂಟೆ ಪಾಳ್ಯದ ಮತಗಟ್ಟೆ ಸಂಖ್ಯೆ 91 ರಿಂದ 94 ರವರೆಗೂ ಎರಡೂ ಪಕ್ಷಗಳ ಕಾರ್ಯಕರ್ತರು ನೀತಿ ಸಂಹಿತೆ ಉಲ್ಲಂಘಿಸಿ ಜಗಳವಾಡಿಕೊಂಡಿದ್ದರು. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.
ಸ್ಥಳದಲ್ಲಿದ್ದ ಬಿಬಿಎಂಪಿ ಅಧಿಕಾರಿ ಶ್ರೀನಿವಾಸ್ ಹಾಗೂ ಪೊಲೀಸ್ ಸಿಬ್ಬಂದಿ ಚಂದ್ರಶೇಖರ್ ನೀಡಿರುವ ದೂರಿನ್ವಯ ಸದ್ಯ ಎರಡೂ ಪಕ್ಷಗಳ ಕಾರ್ಯಕರ್ತರ ವಿರುದ್ಧ ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಕೇಸರಿ ಟೀ ಶರ್ಟ್ ಧರಿಸಿಕೊಂಡು ಕುಟುಂಬಸ್ಥರೊಂದಿಗೆ ಮತ ಚಲಾಯಿಸಲು ಬಂದಿದ್ದ ಯುವಕನೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಿ.ವಿ. ರಾಮನ್ ನಗರದ ಸುದ್ದಗುಂಟೆಪಾಳ್ಯ ನಿನ್ನೆ ಶುಕ್ರವಾರ ನಡೆದಿತ್ತು. ಮೋಹನ್ ಎಂಬ ಯುವಕ ಕೇಸರಿ ಶರ್ಟ್ ಧರಿಸಿ ವೋಟ್ ಹಾಕಲು ಕುಟುಂಬಸ್ಥರೊಂದಿಗೆ ಬಂದಿದ್ದನು. ಈ ವೇಳೆ ಕೆಲವರು ಕೇಸರಿ ಶರ್ಟ್ ಧರಿಸಿದ ಯುವಕ ಮತಗಟ್ಟೆ ಪ್ರವೇಶಿಸಲು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ನಂತರ ಈ ವಿಚಾರವಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದ ಬೈಯ್ಯಪ್ಪನಹಳ್ಳಿ ಪೊಲೀಸರು ಪರಿಸ್ಥಿತಿ ಹತೋಟಿಗೆ ತಂದಿದ್ದರು.
ಇದನ್ನೂ ಓದಿ: ಮಂಗಳೂರು: ಮತದಾನ ಮಾಡುವ ಫೋಟೋ ವೈರಲ್, ಪ್ರಕರಣ ದಾಖಲು - Voting photo viral