ಬೆಂಗಳೂರು : ರಸ್ತೆ ಬದಿ, ಖಾಲಿ ಜಾಗಗಳಲ್ಲಿ ಬಿಬಿಎಂಪಿ ವತಿಯಿಂದ ನೆಡಲಾಗಿರುವ ಗಿಡಗಳ ಬೆಳವಣಿಗೆಗೆ ತೊಡಕಾಗಿದ್ದ ಟ್ರೀ ಗಾರ್ಡ್‌ಗಳನ್ನು ತೆರವುಗೊಳಿಸಲು ಹೆಚ್ಎಸ್ಆರ್ ಸಿಟಿಜನ್ ಫೋರಂ ಮುಂದಾಗಿದೆ.
ಪಾಲಿಕೆಯು ಸಸಿಗಳನ್ನು ನೆಡುವಾಗ ಅವುಗಳ ರಕ್ಷಣೆಗಾಗಿ ಟ್ರೀ ಗಾರ್ಡ್‌ಗಳನ್ನು ಅಳವಡಿಸಲಾಗುತ್ತದೆ. ಆದರೆ, ಗಿಡಗಳು ಬೆಳೆದ ನಂತರ ಗಾರ್ಡ್‌ಗಳನ್ನು ಪಾಲಿಕೆಯಿಂದ ತೆರವುಗೊಳಿಸುತ್ತಿರಲಿಲ್ಲ. ಆದ್ದರಿಂದಾಗಿ ಗಿಡಗಳು ಮರವಾಗಿ ಬೆಳೆಯಲು ಅಡ್ಡಿಯಾಗುತ್ತಿದೆ. ಕಳೆದ ಕೆಲ ವರ್ಷಗಳ ಹಿಂದೆ ಹೆಚ್‌ಎಸ್‌ಆರ್ ಲೇಔಟ್‌ನ ಹಲವು ರಸ್ತೆಗಳಲ್ಲಿ ಗಿಡಗಳನ್ನು ನೆಡಲಾಗಿತ್ತು.
ಈ ಸಸಿಗಳನ್ನು ಜಾನುವಾರುಗಳು ಮೇಯದಂತೆ ಹಾಗೂ ಇತರರು ನಾಶಪಡಿಸಲು ಸಾಧ್ಯವಾಗದಂತೆ ಬಿದಿರಿನಿಂದ ಸಿದ್ಧಪಡಿಸಿದ್ದ ಟ್ರೀ ಗಾರ್ಡ್‌ಗಳನ್ನು ಹಾಕಲಾಗಿತ್ತು. ಆದರೆ, ಗಿಡಗಳು ಬೆಳೆದ ನಂತರ ಅವುಗಳನ್ನು ತೆರವು ಮಾಡಿರಲಿಲ್ಲ. ಹೀಗಾಗಿ, ಹೆಚ್‌ಎಸ್‌ಆರ್ ಸಿಟಿಜನ್ ಫೋರಂ ಹಾಗೂ ಎಸ್‌ಡಬ್ಲ್ಯೂಎಂಆರ್‌ಟಿ ಅವರ ಸಹಯೋಗದೊಂದಿಗೆ ಗಿಡಗಳ ಬೆಳವಣಿಗೆಗೆ ಅಡ್ಡಿಯಾಗಿರುವ ಟ್ರೀ ಗಾರ್ಡ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿದೆ.
ಎಚ್ಎಸ್ಆರ್ ಲೇಔಟ್‌ನಲ್ಲಿ ಸುಮಾರು 8 ರಿಂದ 10 ಸಾವಿರ ಗಿಡಗಳಿದ್ದು, ನಾಲೈದು ವರ್ಷಗಳ ಹಿಂದೆ ಕೂಡ ಹಲವು ಮರಗಳ ಬೆಳವಣಿಗೆಗೆ ಸಂಕೋಲೆಯಾಗಿದ್ದ ಹಲವು ಟ್ರೀ ಗಾರ್ಡ್‌ಗಳನ್ನು ಎಚ್ಎಸ್‌ಆರ್ ಸಿಟಿಜನ್ ಫೋರಂನ ಪದಾಧಿಕಾರಿಗಳು ತೆರವುಗೊಳಿಸಿದ್ದರು. ಈಗ ಮತ್ತೆ ಏ.20ರಂದು ತನ್ನ ಪರಿಸರ ಸ್ನೇಹಿ ಕೆಲಸ ಶುರು ಮಾಡಿರುವ ಫೋರಂ, ಪ್ರತಿ ಶನಿವಾರ ಮತ್ತು ಭಾನುವಾರ ಟ್ರೀ ಗಾರ್ಡ್‌ಗಳ ತೆರವು ಕಾರ್ಯ ಕೈಗೊಂಡಿದೆ.
ಗಿಡಗಳ ರಕ್ಷಣೆಗಾಗಿ ಹಾಕಿದ್ದ ಟ್ರೀ ಗಾರ್ಡ್ ತೆರವಿಗೆ ಅಂದಾಜು 100 ರೂ. ನಿಂದ 120 ರೂ. ವೆಚ್ಚವಾಗುತ್ತದೆ. ಇದ್ಯಾವುದನ್ನೂ ಲೆಕ್ಕಿಸದೇ ಗಿಡಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ. ಬಹುತೇಕ ಕಡೆ ಗಿಡಗಳು ಮರವಾಗಿ ಬೆಳೆಯಲು ಗಾರ್ಡ್‌ಗಳೇ ತೊಡಕಾಗಿವೆ. ಇವುಗಳನ್ನು ತೆರವುಗೊಳಿಸಲು ಪಾಲಿಕೆಯು ಕ್ರಮ ಕೈಗೊಳ್ಳಬೇಕು ಎಂದು ಎಚ್‌ಎಸ್‌ಆರ್ ಸಿಟಿಜನ್ ಫೋರಂ ಸದಸ್ಯರು ಹೇಳಿದ್ದಾರೆ.
ಗಿಡ ನೆಟ್ಟ 2 ರಿಂದ 3 ವರ್ಷದ ಬಳಿಕ ಅವುಗಳನ್ನು ತೆರವುಗೊಳಿಸಬೇಕು. ಪ್ರತಿಯೊಂದು ಟ್ರೀ ಗಾರ್ಡ್ ತೆರವಿಗೆ ಕನಿಷ್ಠ ಅರ್ಧ ತಾಸು ಹಿಡಿಯುತ್ತದೆ. ಕಾಂಕ್ರೀಟ್, ಡಾಂಬರು ಹಾಕಿರುವುದರಿಂದ ಟ್ರೀ ಗಾರ್ಡ್‌ಗಳನ್ನು ತೆರವುಗೊಳಿಸಲು ಹರಸಾಹಸ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ನಾಲ್ಕೈದು ವರ್ಷಗಳ ಹಿಂದೆ ಕೂಡ ಹಲವು ಮರಗಳ ಬೆಳವಣಿಗೆಗೆ ಸಂಕೋಲೆಯಾಗಿದ್ದ ಹಲವು ಟ್ರೀ ಗಾರ್ಡ್‌ಗಳನ್ನು ಎಚ್.ಎಸ್.ಆರ್ ಸಿಟಿಜನ್ ಫೋರಂನ ಪದಾಧಿಕಾರಿಗಳು ತೆರವುಗೊಳಿಸಿದ್ದರು. ಈಗ ಮತ್ತೆ ತನ್ನ ಪರಿಸರ ಸ್ನೇಹಿ ಕೆಲಸ ಶುರು ಮಾಡಲಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಟ್ರೀ ಗಾರ್ಡ್‌ಗಳ ತೆರವು ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸದಸ್ಯರಾದ ಬಿ. ಎನ್ ಎಸ್ ರತ್ನಾಕರ್ ಹೇಳಿದ್ದಾರೆ.
ಇದನ್ನೂ ಓದಿ : ಹೆಚ್ಚಿದ ಬಿಸಿಲಿನ ಬೇಗೆ : 'ಬೆಂಗಳೂರು ಹುಡುಗರು' ತಂಡದಿಂದ ವಿಶಿಷ್ಟ 'ಕೂಲ್ ಟ್ರೀ' ಅಭಿಯಾನ - Cool Tree Campaign